ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ
ಸುರಪುರ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಮಾಜಿ ಯೋಧ ಹಾಗೂ ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಭೀಮಣ್ಣ ನಾಯಕ ಅವರ ಪುತ್ರ ಶ್ರೀನಿವಾಸ ಬಿ. ನಾಯಕ ಅಗ್ನಿವೀರ ಯೋಜನೆಗೆ ಆಯ್ಕೆಯಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ಸನ್ಮಾನಿಸಲಾಯಿತು.
ನಗರದ ತಾಲ್ಲೂಕು ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶ್ರೀನಿವಾಸ ನಾಯಕ ಅವರನ್ನು ಸನ್ಮಾನಿಸಿ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ಸಚಿನ ಕುಮಾರ ನಾಯಕ, “ದೇಶ ಕಾಯುವ ಸೈನಿಕರ ಸೇವೆ ಅತ್ಯಂತ ಪವಿತ್ರವಾದುದು. ಭೀಮಣ್ಣ ನಾಯಕ ಅವರು ಬಿಎಸ್ಎಫ್‌ನಲ್ಲಿ 21 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ರೈತರ ಹಾಗೂ ಸೈನಿಕರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. 2019 ರಲ್ಲಿ ದೊಡ್ಡ ಮಗನನ್ನು ಅಪಘಾತದಲ್ಲಿ ಕಳೆದುಕೊಂಡ ದುಃಖದ ನಡುವೆಯೂ, ಕಿರಿಯ ಮಗನನ್ನು ದೇಶಸೇವೆಗೆ ಕಳುಹಿಸಲು ಪೋಷಕರು ಧೈರ್ಯ ತುಂಬಿರುವುದು ಇಡೀ ತಾಲ್ಲೂಕಿಗೆ ಹೆಮ್ಮೆಯ ವಿಷಯ,” ಎಂದರು.
ಮುಂದುವರಿದು ಮಾತನಾಡಿದ ಅವರು, “ಗಡಿಯಲ್ಲಿ ಮೈನಡುಗಿಸುವ ಚಳಿಯಲ್ಲೂ ಕರ್ತವ್ಯ ನಿರ್ವಹಿಸುವ ಯೋಧರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಸ್ಥಳೀಯ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಯೋಧರ ಕುಟುಂಬದ ಸುಖ-ದುಃಖದಲ್ಲಿ ನಾವೆಲ್ಲರೂ ಸದಾ ಜೊತೆಗಿರಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಪ್ರಮುಖರಾದ ಗುರುನಾಥ ರೆಡ್ಡಿ, ದೇವರಾಜ, ಮೌನೇಶ ದೇವಿಕೇರಿ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ
180
