ರಾಯಚೂರು: ಸಮಾಜ ವಿರೋಧಿ ಕೃತ್ಯ; ಐವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ ಎಸಿ
ರಾಯಚೂರು: ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡಿ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಐವರು ವ್ಯಕ್ತಿಗಳನ್ನು ರಾಯಚೂರು ಜಿಲ್ಲೆಯಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ)(ಬಿ) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಐವರ ಪೈಕಿ ನಾಲ್ವರನ್ನು ವಿಜಯಪುರ ಜಿಲ್ಲೆಗೆ ಮತ್ತು ಓರ್ವ ವ್ಯಕ್ತಿಯನ್ನು ವಿಜಯನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಯಾರಿಗೆ, ಎಲ್ಲಿಗೆ ಗಡಿಪಾರು?
ಮಿರ್ಜಾಪುರ ಗ್ರಾಮದ ಮಲದಕಲ್ ಮಲ್ಲಿಕಾರ್ಜುನ, ಅರೋಲಿ ಭೀಮಣ್ಣ, ಗೋರೆಪ್ಪ ಮತ್ತು ತಾಯಪ್ಪ ಅವರನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ, ಗ್ರಾಮೀಣ, ಹೋರ್ತಿ ಮತ್ತು ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಗಡಿಪಾರು ಮಾಡಲಾಗಿದೆ. ಆಲಾದಿ ಎಂಬ ವ್ಯಕ್ತಿಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಎರಡು ತಿಂಗಳ ಅವಧಿ ನಿಗದಿ
ಗಡಿಪಾರು ಅವಧಿಯನ್ನು 2025ರ ನವೆಂಬರ್ 6ರಿಂದ 2026ರ ಜನವರಿ 6ರವರೆಗೆ ಒಟ್ಟು ಎರಡು ತಿಂಗಳುಗಳ ಕಾಲ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ಗಡಿಪಾರು ಮಾಡಲ್ಪಟ್ಟವರು ಆಯಾ ಪೊಲೀಸ್ ಠಾಣೆಗಳಿಗೆ ಹಾಜರಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಗಡಿಪಾರು ಅವಧಿಯಲ್ಲಿ ಈ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾವಹಿಸುವಂತೆ ಮತ್ತು ಆದೇಶ ಉಲ್ಲಂಘಿಸಿ ಯಾರಾದರೂ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಠಾಣಾಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೆ, ಆರೋಪಿಗಳು ಪ್ರತೀ ವಾರ ಆಯಾ ಪೊಲೀಸ್ ಠಾಣೆಗೆ ಹೋಗಿ ಹಾಜರಿ ನೀಡಬೇಕು ಎಂದು ತಿಳಿಸಲಾಗಿದೆ.

