ಯಾದಗಿರಿ (ಕಂದಕೂರು) : ನವೆಂಬರ್ 20, : ಮಕ್ಕಳಿಗೆ ಕೂಲಿ ಕೆಲಸಕ್ಕೆ ಕಳುಹಿಸದೆ ಶಾಲೆಗೆ ಕಳುಹಿಸುವುದು ಪ್ರತಿಯೋಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಪಾಲಕ, ಪೋಷಕರು ಹಾಗೂ ಆಟೋ, ಟಂಟಂಗಳ ಚಾಲಕರಿಗೆ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ1986, ತಿದ್ದುಪಡಿ 2016”ರ ಕುರಿತು ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಹೇಳಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಂದಕೂರು/ಎಲ್ಹೇರಿ ಗ್ರಾಮಗಳ ಮಾರ್ಗವಾಗಿ ಆಟೋ, ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಕಾರ್ಮಿಕ ಇಲಾಖೆಯಿಂದ ಹಠಾತ್ ದಾಳಿ/ತಪಾಸಣೆಯನ್ನು ಕೈಗೊಂಡು ಕೂಲಿ ಕೆಲಸಕ್ಕಾಗಿ ಆಟೋಗಳಲ್ಲಿ ತೆರಳಿದ್ದ ಸುಮಾರು 6ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಹೊಗುವಂತೆ ತಿಳುವಳಿಕೆ ನೀಡಿ ಮರಳಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು.
ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಸಂಗೀತಾ ಹೊನ್ನೂರು ರವರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕ, ಆಟೋ-ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಿರಂತರವಾಗಿ ಬಾಲ/ಕಿಶೋರ ಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಹೊರತಾಗಿಯೂ ಆಟೋ/ಟಂಟಂಗಳ ಮೂಲಕ ಕೃಷಿ ಹಾಗೂ ಇನ್ನಿತರೆ ಕೆಲಸಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಚಾಲಕರ ವಿರುದ್ಧ ಆರ್.ಟಿ.ಓ ಅಧಿಕಾರಿಗಳ ಮೂಲಕ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೊಗುತ್ತಿದ್ದ ಆಟೋ/ಟಂಟಂಗಳ ಮಾಲೀಕರ ವಿರುದ್ದ ಪ್ರಕರಣವನ್ನು ಸಹ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕರಾದ ಅಯ್ಯಾಳಪ್ಪ, ಸಿಬ್ಬಂದಿ ಮಾಳಪ್ಪ ಪೂಜಾರಿ, ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಪ್ರಾನ್ಸಿಸ್ ಶಾಭು, ಗೃಹ ರಕ್ಷಕ ದಳದ ಚಂದ್ರಶೇಖರ್ ಮುದ್ನಾಳ, ಕಾರ್ಮಿಕ ಇಲಾಖೆಯ ಬಾಲು ನಾಯಕ, ವೆಂಕಟೇಶ ಶಿವಾಂಗೆ , ಮಾರ್ಗದರ್ಶಿ ಸಂಸ್ಥೆಯ ಈಶಪ್ಪ ಚೂರಿ ಉಪಸ್ಥಿತರಿದ್ದರು.

