ಸುರಪುರ: ತಾಲ್ಲೂಕಿನ ವಾರಿ ಸಿದ್ದಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಲಭೀಮೇಶ್ವರ ಕಾರ್ತಿಕೋತ್ಸವ ಹಾಗೂ ಮರೆಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲ್ಲೇಶ್ ಕೋನಾಳ ರಚಿತ ‘ನಾಡಿನ ಹುಲಿ ಕಾಡಿಗೆ ಬಲಿ’ ಎಂಬ ಸಾಮಾಜಿಕ ನಾಟಕ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ನಾಲ್ವಡಿ ಶ್ರೀ ರಾಜಾ ವೆಂಕಟಪ್ಪ ನಾಯಕ ನಾಟ್ಯ ಹವ್ಯಾಸಿ ಕಲಾವಿದರ ಸಾಂಸ್ಕೃತಿಕ ಸಂಘ (ಕಬಾಡಗೇರಾ) ಮತ್ತು ವಾರಿ ಸಿದ್ದಾಪುರದ ಶ್ರೀ ಮಾರುತೇಶ್ವರ ನವ ತರುಣ ನಾಟ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಾಟಕಕ್ಕೆ ಚಾಲನೆ:
ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷರಾದ ಭೀಮನಗೌಡ ಲಕ್ಷ್ಮೀ ಹೆಮನೂರು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ಗ್ರಾಮೀಣ ಭಾಗದ ಕಲೆಗಳು ಜೀವಂತವಾಗಿರಬೇಕು. ಇಂತಹ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ,” ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಹಾಗೂ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ ಅವರು ಕಲೆ ಮತ್ತು ಸಂಸ್ಕೃತಿಯ ಮಹತ್ವದ ಕುರಿತು ಮಾತನಾಡಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ರಮೇಶ್ ದೊರೆ ಆಲ್ದಾಳ, ಪ್ರಥಮ ದರ್ಜೆ ಗುತ್ತಿಗೆದಾರರಾದ ನಿಂಗಣ್ಣ ಸಾಹುಕಾರ ಕಾಡ್ಲೂರ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹುಲಗಪ್ಪ ಶಖಾಪುರ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಕೆ. ಎಲೆಗಾರ, ಪ್ರಾ.ಕೃ.ಪ.ಸಂ. ಅಧ್ಯಕ್ಷ ಬಸವರಾಜ ದೋರನಹಳ್ಳಿ, ಶರಣು ಕನಕ ಟ್ರೇಡರ್ಸ್, ಶಿವುಕುಮಾರ ಗುಮ್ಮಾ, ರಾಘವೇಂದ್ರ ಸಗರ, ರಂಗನಾಥ್ ಜಾಲಹಳ್ಳಿ ಲಕ್ಷ್ಮೀಪುರ ಹಾಗೂ ಶರಣಪ್ಪ ತಳವಾರ ವಾರಿ ಸಿದ್ದಾಪುರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮನಸೂರೆಗೊಂಡ ಅಭಿನಯ:
ರಚನೆಗಾರರಾದ ಮಲ್ಲೇಶ್ ಕೋನಾಳ ಅವರ ನೇತೃತ್ವದಲ್ಲಿ ರವಿಕಿರಣ ಹೊಸ ಸಿದ್ದಾಪುರ, ಭೀಮಣ್ಣ ಸಿದ್ದಾಪುರ, ಯಂಕಪ್ಪ ಜಾಲಹಳ್ಳಿ, ರಾಮು ಮೂಲಿಮನಿ, ಮಾನಯ್ಯ ರಾಗೇರಿ, ಭೀಮು ವಾರಿ, ಹಣಮಂತ ಬೈರಿಮರಡಿ ಹಾಗೂ ಶಂಕರ ಹವಾಲ್ದಾರ್ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸ್ತ್ರೀ ಪಾತ್ರಗಳಲ್ಲಿ ಮೀನಾಕ್ಷಿ ಮುದೋಳ, ತ್ರಿವೇಣಿ ತುಮಕೂರು, ರಂಜೀತಾ ದುಧನಿ ಅಭಿನಯ ಗಮನ ಸೆಳೆಯಿತು. ಬೆಂಗಳೂರಿನ ಡ್ಯಾನ್ಸರ್ ಜಾನು ಅವರ ನೃತ್ಯ ನಾಟಕಕ್ಕೆ ಮೆರುಗು ನೀಡಿತು.
ಕಾರ್ಯಕ್ರಮವನ್ನು ನಿಂಗಪ್ಪ ನಾಯಕ ಬಿಜಾಸ್ಪೂರ ನಿರೂಪಿಸಿದರು, ರವಿಕುಮಾರ ನಾಯಕ ಬೈರಿಮರಡಿ ವಂದಿಸಿದರು. ಗ್ರಾಮದ ಹಿರಿಯರು ಹಾಗೂ ಯುವಕರು ಈ ಸಾಂಸ್ಕೃತಿಕ ಸಂಜೆಗೆ ಸಾಕ್ಷಿಯಾದರು.

