ವಿಭೂತಿಹಳ್ಳಿ (ಶಹಾಪುರ ತಾಲ್ಲೂಕು): “ಹಣ ಕೊಟ್ಟು ಒಂದಲ್ಲ, ಇಡೀ ಅರಣ್ಯ ಪ್ರದೇಶವನ್ನೇ ಲೂಟಿ ಹೊಡೆಯಿರಿ ಎನ್ನುವ ಮನಸ್ಥಿತಿ ಇಲ್ಲಿನ ಪ್ರಾದೇಶಿಕ ಅರಣ್ಯ ನಿರೀಕ್ಷಕ ಮತ್ತು ಅರಣ್ಯ ಪಾಲಕರದ್ದು” – ಇದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ನಿವಾಸಿ ನೀಲಪ್ಪ ಹಾದಿಮನಿ ಅವರು ಜಿಲ್ಲೆಯ ಅರಣ್ಯ ಇಲಾಖೆಯ ಕರ್ಮಕಾಂಡದ ಬಗ್ಗೆ ವ್ಯಕ್ತಪಡಿಸಿರುವ ತೀವ್ರ ಆಕ್ರೋಶ.
ವಿಭೂತಿಹಳ್ಳಿ ಮತ್ತು ಶಹಾಪುರ ಮಾರ್ಗಮಧ್ಯೆ, ವಿಭೂತಿಹಳ್ಳಿಯ ಸಮೀಪವಿರುವ ಒಂದು ಖಾಸಗಿ ಪೆಟ್ರೋಲ್ ಪಂಪ್ ಮಾಲೀಕನ ಹಿತರಕ್ಷಣೆಗೆ ಇಪ್ಪತ್ತು-ಮೂವತ್ತು ವರ್ಷಗಳಿಂದ ಸಮೃದ್ಧವಾಗಿ ಬೆಳೆದಿದ್ದ, ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ನಿಯಮಬಾಹಿರವಾಗಿ ಕತ್ತರಿಸಲಾಗಿದೆ. ಈ ಸಂಬಂಧ ನೀಲಪ್ಪ ಹಾದಿಮನಿ ಅವರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ದುರಾಸೆ ಮತ್ತು ನಿರ್ಲಕ್ಷ್ಯದ ಮೇಲೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಪಂಪ್ ಮಾಲಕನ “ದರ್ಬಾರ್“!
ರಸ್ತೆಯ ಬದಿಯಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ವೃಕ್ಷಗಳು ತನ್ನ ಪೆಟ್ರೋಲ್ ಪಂಪನ್ನು ಮರೆ ಮಾಚುತ್ತವೆ ಎಂಬ ಕಾರಣಕ್ಕೆ, ಖಾಸಗಿ ಮಾಲೀಕನೊಬ್ಬ ಪ್ರಾದೇಶಿಕ ಅರಣ್ಯ ಇಲಾಖೆಯೊಂದಿಗೆ ಶಾಮೀಲಾಗಿ ಮರಗಳನ್ನು ಕತ್ತರಿಸಲು ಅವಕಾಶ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
“ಸುಮಾರು ಇಪ್ಪತ್ತು ಮೂವತ್ತು ವರ್ಷಗಳಿಂದ ಸಂರಕ್ಷಿಸಲ್ಪಟ್ಟು, ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆಸಿದ ಮರಗಳು, ಕೇವಲ ಪೆಟ್ರೋಲ್ ಪಂಪ್ ಕಾಣಿಸಲಿ ಎನ್ನುವ ಕಾರಣಕ್ಕೆ ನಿಯಮಬಾಹಿರವಾಗಿ ಕತ್ತರಿಸುವುದು ಎಷ್ಟು ಸರಿ?” ಎಂದು ಹಾದಿಮನಿ ಅವರು ಪ್ರಶ್ನಿಸಿದ್ದಾರೆ. ಅರಣ್ಯವನ್ನು ಸಂರಕ್ಷಿಸಬೇಕಾದ ಅರಣ್ಯ ನಿರೀಕ್ಷಕ ಮತ್ತು ಅರಣ್ಯ ಪಾಲಕರೇ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ಇದೆಯೇ?
“ನಮ್ಮ ಜಿಲ್ಲೆ ಯಾವ ಸ್ಥಿತಿಯಲ್ಲಿದೆ ಮತ್ತು ಈ ಜಿಲ್ಲೆಗೆ ಕಾನೂನು ಕಾಯ್ದೆಗಳು ಅನ್ವಯಿಸುತ್ತವೆಯೇ ಎಂಬ ಅನುಮಾನ ಕಾಡುತ್ತಿದೆ” ಎಂದು ನೀಲಪ್ಪ ಹಾದಿಮನಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವು ಸ್ಪಷ್ಟವಾಗಿ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯ (Karnataka Tree Preservation Act) ಗಂಭೀರ ಉಲ್ಲಂಘನೆಯಾಗಿದೆ.
ಕೂಡಲೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ಈ ಕುರಿತು ಸೂಕ್ತ ತನಿಖೆ ನಡೆಸಿ, ಮರಗಳ ನಾಶಕ್ಕೆ ಕಾರಣರಾದ ಸಂಬಂಧಿಸಿದ ಶಿಬ್ಬಂದಿಗಳ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳೇ ಕಾಯ್ದೆ ಉಲ್ಲಂಘಿಸಿ ಖಾಸಗಿ ಹಿತಾಸಕ್ತಿಗೆ ಮಣೆ ಹಾಕಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ಅಕ್ರಮದ ಬಗ್ಗೆ ಗಮನಹರಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ.

ಈ ಮರಗಳ ಕಡಿತದ ಹಿಂದೆ ಅರಣ್ಯ ನಿರೀಕ್ಷಕ ಕಾಶಪ್ಪ ಅವರಿದ್ದು ಇದು ಮೊದಲ ಘಟನೆಯಲ್ಲ. ಅನೇಕ ಸಲ ಅನೇಕರೊಂದಿಗೆ ಶಾಮೀಲಾಗಿ ಆತ ಮರಗಳ ನಾಶಕ್ಕೆ ಕಾರಣನಾಗಿದ್ದಾನೆ-ನೀಲಪ್ಪ ಹಾದಿಮನಿ, ವಿಭೂತಿಹಳ್ಳಿ ನಿವಾಸಿ.

