ಮಾಲೂರು: (ಜನ ಆಕ್ರೋಶ ವರದಿ):ಮಾಲೂರು ತಾಲೂಕಿನ ಶಿಕ್ಷಣ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ಮತ್ತೊಂದು ಕರುಳು ಕತ್ತರಿಸುವ ಘಟನೆ ಸಾಕ್ಷಿಯಾಗಿದೆ. ಶಾಲೆಗೆಂದು ಹೊರಟ ಬಾಲ ಜೀವ, ಹೊಣೆಗೇಡಿ ಶಿಕ್ಷಕನ ನಿರ್ಲಕ್ಷ್ಯದ ದೆಸೆಯಿಂದಾಗಿ, ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆಗೆ ಸಿದ್ಧನಾಗಿದ್ದಾನೆ. ಈ ಹೃದಯವಿದ್ರಾವಕ ದುರಂತಕ್ಕೆ ಕಾರಣೀಭೂತರಾದ ದಪ್ಪ ಚರ್ಮದ ಆಡಳಿತ ವ್ಯವಸ್ಥೆಗೆ ನಾಗರಿಕ ಸಮುದಾಯದಿಂದ ಧಿಕ್ಕಾರವಿರಲಿ. ಶಿಕ್ಷಣದ ಮೂಲಭೂತ ಹಕ್ಕನ್ನು ಪಡೆಯಲು ಹೋದ ಆ ಬಾಲಕ ಮಸಣದತ್ತ ಪಯಣಿಸಿದ್ದು, ಇಡೀ ವ್ಯವಸ್ಥೆಯ ದಾರಿದ್ರ್ಯವನ್ನು ಎತ್ತಿ ಹಿಡಿದಿದೆ.
ಮಾಲೂರು ತಾಲೂಕಿನ ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡದನಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘೋರ ದುರಂತ ಸಂಭವಿಸಿದೆ. ಒಂಭತ್ತು ವರ್ಷದ ಸುರೇಂದ್ರ ಎಂಬ ಮೂರನೇ ತರಗತಿಯ ಹುಡುಗ, ಅಸಡ್ಡೆಯ ಶಿಕ್ಷಕ ತಿಂದ ತಟ್ಟೆಯನ್ನು ತೊಳೆಯಲು ಹೋಗಿ, ಶಾಲಾ ಆವರಣದಲ್ಲಿರುವ ಅಪಾಯಕಾರಿ ನೀರಿನ ಸಂಪ್‌ಗೆ ಮುಗಿಚಿಬಿದ್ದು ಅಸುನೀಗಿದ್ದಾನೆ. ಈ ನಿರ್ಲಜ್ಜ ಘಟನೆ ನಮ್ಮ ಆಡಳಿತ ಯಂತ್ರದ ಮೇಲೆ ಕಠಿಣ ಪ್ರಶ್ನೆಗಳನ್ನು ಎಸೆದಿದೆ.
ಸಾರ್ವಜನಿಕ ವಲಯದಲ್ಲಿ ಇಂದು ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಮನೋಭಾವ ಸೃಷ್ಟಿಯಾಗಲು, ಇಂತಹ ಜೀವ ಭದ್ರತೆ ಇಲ್ಲದ ಅವಘಡಗಳೇ ಪ್ರಮುಖ ಕಾರಣ. ಪ್ರಾಮಾಣಿಕ ಮಾತೃ ಹೃದಯದ ಶಿಕ್ಷಕರ ಮಧ್ಯೆ ಇರುವ ಕೆಲ ಅಸಡ್ಡೆ, ಬೇಜವಾಬ್ದಾರಿ, ಮತ್ತು ಉಡಾಫೆಯ ಶಿಕ್ಷಕರಿಂದ ಇಲಾಖೆಯ ಘನತೆ ಧೂಳೀಪಟವಾಗುತ್ತಿದೆ.
ನಾಡು ೭೯ನೇ ಕನ್ನಡ ರಾಜ್ಯೋತ್ಸವದ ವೈಭವದಲ್ಲಿ ಮುಳುಗಿರುವಾಗ, ಈ ದುರ್ಘಟನೆಯಿಂದ ಆ ಶಾಲೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಶಾಲೆಯ ಆವರಣಕ್ಕೆ ಬೇಗ ಬಿದ್ದಿದ್ದು, ಕನ್ನಡ ಬಾವುಟ ಹಾರಾಟವೂ ಇಲ್ಲ. ಅತ್ತ ಪಟ್ಟಣದ ರಾಜಬೀದಿಗಳಲ್ಲಿ ಸಂಭ್ರಮದ ಮೆರವಣಿಗೆ ಸಾಗಿದ್ದರೆ, ಇತ್ತ ಗ್ರಾಮದಲ್ಲಿ ಮಸಣದ ಕಡೆಗೆ ಶಾಲಾ ಬಾಲಕನ ಶವಯಾತ್ರೆ ಹೋಗಿದ್ದು, ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಶಾಲೆಯಲ್ಲಿದ್ದ ಐದು ಮಕ್ಕಳಲ್ಲಿ ಒಂದು ಜೀವ ಬಲಿಯಾಗಿದ್ದು, ಉಳಿದ ನಾಲ್ಕು ಮಕ್ಕಳ ಶಿಕ್ಷಣ ಅಯೋಮಯವಾಗಿ ಬೇರೆ ಶಾಲೆಗಳ ಕಡೆ ಮುಖಮಾಡಿದ್ದಾರೆ. ಒಬ್ಬ ಅಸಡ್ಡೆ ಶಿಕ್ಷಕನಿಂದಾಗಿ ಶಾಲೆಯು ಶಾಶ್ವತವಾಗಿ ಮುಚ್ಚುವ ಸ್ಥಿತಿ ತಲೆದೋರಿದ್ದು, ಆ ಶಿಕ್ಷಕ ನಾಪತ್ತೆಯಾಗಿದ್ದಾನೆ. ಮಗನನ್ನು ಕಳೆದುಕೊಂಡ ಆ ಏಕಪೋಷಕ ತಾಯಿಯ ಆಕಾಶವೇ ಕಳಚಿಬಿದ್ದಂತಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಮಣ್ಣಲ್ಲಿಟ್ಟು ಬಿಳ್ಕೊಟ್ಟ ಆ ತಾಯಿಯ ವೇದನೆಗೆ ಇಡೀ ಸಮಾಜವೇ ತಲೆಬಾಗಲೇಬೇಕು.
ಜಿಡ್ಡುಗಟ್ಟಿದ ವ್ಯವಸ್ಥೆಯ ಪುನರಾವರ್ತನೆ
ಮಾಲೂರು ತಾಲ್ಲೂಕಿನಲ್ಲಿ ಇಂತಹ ಸಾವಿನ ಘಟನೆಗಳು ನಡೆಯುತ್ತಿರುವುದು ಇದು ಮೊದಲಲ್ಲ. ಕಳೆದ ವರ್ಷ ದಿನ್ನೇರಿ ಹಾರೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ ಶೌಚಾಲಯಕ್ಕೆಂದು ಕೆರೆಗೆ ಹೋಗಿ ಬಿದ್ದು ದಾರುಣವಾಗಿ ಅಂತ್ಯ ಕಂಡಿದ್ದ. ಶೌಚಾಲಯಕ್ಕೆ ಬೀಗ ಹಾಕಿದ ಪರಿಣಾಮ ಈ ದುರಂತ ಸಂಭವಿಸಿತ್ತು. ಆಗ ಈ ಘಟನೆಯನ್ನು ಮುಚ್ಚಿ ಹಾಕಲು ನಡೆದಿದ್ದ ಭ್ರಷ್ಟ ಪ್ರಯತ್ನಗಳನ್ನು ಈ ಪತ್ರಿಕೆ ಖಂಡಿಸಿತ್ತು. ಇಷ್ಟಾದರೂ ನಿರ್ಲಕ್ಷ್ಯ ಮುಂದುವರಿದಿದ್ದು, ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಮತ್ತು ಬೇಜವಾಬ್ದಾರಿ ಶಿಕ್ಷಕರಿಂದ ಈ ದುರಂತಗಳು ಪುನರಾವರ್ತನೆಯಾಗುತ್ತಿವೆ.
ಶಾಸಕರಿಂದ ಪರಿಹಾರದ ಭರವಸೆ: ಆದರೆ ಚುರುಕು ಮುಟ್ಟಿಸಿ!
ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆಗೆ ಕ್ಷೇತ್ರದ ಶಾಸಕರು ಬೆಲೆ ತೆರುತ್ತಿದ್ದು, ಘಟನೆ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅಧಿಕಾರಿಗಳಿಗೆ ತಾಕೀತು ನೀಡಿದ್ದು, ನೊಂದ ಕುಟುಂಬಕ್ಕೆ ನೆರವಿನ ಹಸ್ತ ನೀಡಿ ಆಸರೆಯಾಗಿ ನಿಲ್ಲಲು ಮುಂದಾಗಿದ್ದಾರೆ. ಇದರ ಜೊತೆ ಶಾಸಕರು ಆಡಳಿತ ಯಂತ್ರಕ್ಕೆ ಇನ್ನಷ್ಟು ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ.
ನೂತನವಾಗಿ ಶಿಕ್ಷಣದ ಚುಕ್ಕಾಣಿ ಹಿಡಿದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಾರ್ಯಭಾರ ನಡೆಸುವ ಬದಲು, ವಾರಕ್ಕೆ ಮೂರು ದಿನವಾದರೂ ತಾಲ್ಲೂಕಿನ ಶಾಲೆಗಳಿಗೆ ದಿಢೀರನೆ ಭೇಟಿ ನೀಡಿ, ಶಿಕ್ಷಕರ ಉಡಾಫೆ, ಸಮಯ ಪಾಲನೆಯ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮೊಬೈಲ್‌ಗಳಲ್ಲಿ ರಿಲ್ಸ್ ನೋಡುತ್ತಾ ಕಾಲ ಕಳೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ಜೀವಕ್ಕೆ ಭದ್ರತೆ ಒದಗಿಸಲು ಮುಂದಾಗಬೇಕಾಗಿದೆ.
✍️ ಭೀಮ ಬಂಧು ಮಂಜುನಾಥ್
ಪತ್ರಕರ್ತ

