1008 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಯಾದಗಿರಿ : ಚಿತ್ತಾಪುರ ತಾಲೂಕಿನ ಸೂಗೂರು ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಶ್ರೀ ಕುಮಾರ ಭೋಜರಾಜನ ಜನ್ಮದಿನದ ಪ್ರಯುಕ್ತ ಜ.3ರಂದು ಸಂಜೆ 5ಕ್ಕೆ ಉಡಿ ತುಂಬುವ ಹಾಗೂ ತುಲಾಭಾರ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತಾನವರು ಹೇಳಿದರು.
ನಗರದ ಭಕ್ತರ ಮನೆಯಲ್ಲಿ ಜನ್ಮದಿನೋತ್ಸವ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಶ್ರೀಮಠದ ವಕ್ತಾರ ಈರಣ್ಣ ಬಲ್ಕಲ್ ಮಾತನಾಡಿ, ಶ್ರೀ ಕುಮಾರ ಭೋಜರಾಜರ ಜನ್ಮದಿನ ನಿಮಿತ್ತ ನಡೆಯುವ ಕಾರ್ಯಕ್ರಮದಲ್ಲಿ 1008 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೀಗಳ ತುಲಾಭಾರ ಕಾರ್ಯಕ್ರಮ ನೆರವೇರಲಿದ್ದು, ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಹಿರಗಪ್ಪ ತಾತಾನವರು ದಿವ್ಯ ಸಾನ್ನಿಧ್ಯವಹಿಸಲಿದ್ದು, ನಾಡಿನ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶಿಕ್ಷಕ ಶರಣಬಸಪ್ಪ ನಾಸಿ ಮಾತನಾಡಿ, ಶ್ರೀ ಕುಮಾರ ಭೋಜರಾಜರಿಗೆ ಹಾಗೂ ಶ್ರೀ ಹಿರಗಪ್ಪ ತಾತನವರಿಗೆ ಹಂಪನಗೌಡ ಭಕ್ತರಿಂದ ತುಲಾಭಾರ, ಸೂಗೂರ ಎನ್ ಭಕ್ತರಿಂದ ಕೇಕ್ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯಾದಗಿರಿ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದರು.

