ಜೇವರ್ಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬೇಡಿಕೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಜೇವರ್ಗಿ ತಾಲ್ಲೂಕು ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೇವರ್ಗಿ ತಹಶೀಲ್ದಾರ್ ಮುಖಾಂತರ ಸಲ್ಲಿಸಲಾದ ಮನವಿಯಲ್ಲಿ, ತಾಲ್ಲೂಕು ಅಧ್ಯಕ್ಷರಾದ ಜಗದೀಶ್ ಕಡ್ಲಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂತೇಶ್ ಎಸ್ ಜಮಾದಾರ್ ಸೇರಿದಂತೆ ಇತರೆ ಪದಾಧಿಕಾರಿಗಳು ರೈತರ ಪ್ರಮುಖ ಹಕ್ಕು ಒತ್ತಾಯಗಳನ್ನು ಮುಂದಿಟ್ಟಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು:
- ಕಬ್ಬು ಬೆಲೆ ಪಾವತಿ: ಸರ್ಕಾರಿ ಆದೇಶದಂತೆ ಪ್ರತಿ ಟನ್ ಕಬ್ಬಿಗೆ ರೂ. 3,165/- ರಂತೆ ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು.
- ಹತ್ತಿ ಖರೀದಿ ಅವ್ಯವಹಾರ ನಿಲ್ಲಿಸಿ: ಹತ್ತಿ ಖರೀದಿ ಕೇಂದ್ರಗಳಲ್ಲಿ ಸಿಸಿಐ ಮತ್ತು ಖಾಸಗಿ ಗಿರಣಿಗಳು ತೇವಾಂಶ, ತೂಕದ ನೆಪವೊಡ್ಡಿ ದರದಲ್ಲಿ ಮೋಸ ಮಾಡುತ್ತಿರುವುದನ್ನು ತಡೆಗಟ್ಟಲು ಎಪಿಎಂಸಿ ಕಾರ್ಯದರ್ಶಿಗಳು ಕೂಡಲೇ ರೈತರ ಸಭೆ ಕರೆದು ಕ್ರಮ ಕೈಗೊಳ್ಳಬೇಕು.
- ತೊಗರಿ ಖರೀದಿ: ತೊಗರಿ ಕಟಾವುಗೂ ಮುನ್ನವೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ, ಪ್ರತಿ ಕ್ವಿಂಟಲ್‌ಗೆ ರೂ. 10,500/- ದರ ನಿಗದಿಪಡಿಸಬೇಕು.
- ಪರಿಹಾರ ಮತ್ತು ವಿಮೆ ಬಿಡುಗಡೆ: ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ತಕ್ಷಣವೇ ಪರಿಹಾರ ಮತ್ತು ಮಧ್ಯಂತರ ಬೆಳೆ ವಿಮಾ ಮೊತ್ತವನ್ನು ಬಿಡುಗಡೆ ಮಾಡಬೇಕು.
- ಹಿಂಗಾರು ನೆರವು: ಮುಂಗಾರು ನಷ್ಟವಾಗಿರುವುದರಿಂದ ಹಿಂಗಾರು ಬಿತ್ತನೆಗೆ ರೈತರಿಗೆ ಬೀಜ ಮತ್ತು ಗೊಬ್ಬರವನ್ನು ಉಚಿತವಾಗಿ ಒದಗಿಸಬೇಕು.
ಸಂಘಟನೆಯ ಪ್ರಮುಖರು, ಬೆಳೆ ನಷ್ಟದಿಂದ ರೈತರು ಸಾಲ ತೀರಿಸಲು ಆಗದಂತಹ ದುಸ್ಥಿತಿಯಲ್ಲಿದ್ದಾರೆ. ಸರ್ಕಾರ ಕೂಡಲೇ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕು. ಒಂದು ವೇಳೆ ಸರ್ಕಾರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ, ರೈತ ಸಂಘಟನೆಗಳು ಜೇವರ್ಗಿ ತಾಲ್ಲೂಕಿನಲ್ಲಿ ಬಂದ್ ಕರೆ ನೀಡಿ ಉಗ್ರ ಪ್ರತಿಭಟನೆಗೆ ಮುಂದಾಗಲಿವೆ ಎಂದು ಎಚ್ಚರಿಸಿದರು.

