ಅರಕೇರ(ಕೆ) ಗ್ರಾಮದಲ್ಲಿ ಕೆಪಿಎಸ್ – ಮ್ಯಾಗ್ನೆಟ್ ಶಾಲೆ ಬೇಡ ಎಂದು ಪೋಷಕರು ನಡೆಸಿದ ಬೃಹತ್ ಪ್ರತಿಭಟನೆ!
ಯಾದಗಿರಿ ತಾಲೂಕಿನ ಅರಕೇರ(ಕೆ) ಕೆಪಿಎಸ್ ಶಾಲೆಗೆ ಸುತ್ತಮುತ್ತಲಿನ ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅರಕೇರಾ ಗ್ರಾಮದ ಬಸ್ ಸ್ಟ್ಯಾಂಡ್ ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ವಿಲೀನಗೊಳ್ಳುತ್ತಿರುವ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ, ನಮ್ಮೂರಲ್ಲಿ ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆ ನಮಗೆ ಬೇಡ ಎಂದು ಘೋಷಣೆಗಳನ್ನು ಕೂಗಿ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷರಾದ ಹಣಮಂತ ಎಸ್ ಎಚ್ ರವರು, ಸರ್ಕಾರದ ಅಕ್ಟೋಬರ್ 15ರ ಆದೇಶದ ಪ್ರಕಾರ, ಈ ಕೆಪಿಎಸ್ ಶಾಲೆಗಳ ವ್ಯವಸ್ಥೆಯು ಹೊರಗುತ್ತಿಗೆಯಿಂದ ನಡೆಯಬೇಕು, ತಮ್ಮ ಆದಾಯವನ್ನು ತಾವೇ ಸೃಷ್ಟಿಸಿಕೊಳ್ಳಬೇಕು ಎಂದಿದೆ. ಮಂಡ್ಯದಲ್ಲಿರುವ ಕೆಪಿಎಸ್ ಶಾಲೆಗೆ ಬರುವ ಮಕ್ಕಳು ತಿಂಗಳಿಗೆ ರೂ. 3,800 ಕೊಟ್ಟು ಬಸ್ ಗಳಲ್ಲಿ ಶಾಲೆಗೆ ಬರಬೇಕು. ಅರಕೇರ ಶಾಲೆನಲ್ಲೂ ಇದೇ ಪರಿಸ್ಥಿತಿ ಆಗಲಿದೆ, ಹೀಗಾಗಿ ಸರ್ಕಾರಿ ಶಾಲೆಗಳು ನಮ್ಮ ಹಕ್ಕು, ಸರ್ಕಾರ ಅವುಗಳನ್ನು ಮುಚ್ಚಲು ಪೋಷಕರು ಒಪ್ಪಿಗೆ ಕೊಡದಂತೆ ಜನ ಹೋರಾಟಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಎಲ್ಲಾ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿರುವ ಸರ್ಕಾರ, ಇದೀಗ ಗ್ರಾಮಗಳ ಮಟ್ಟದಲ್ಲಿ ಉಳಿದುಕೊಂಡಿರುವ ಶಾಲೆಗಳಿಗೂ ಬೀಗ ಹಾಕಲು ಮುಂದಾಗಿದೆ. ಈ ಮ್ಯಾಗ್ನೆಟ್ ಶಾಲೆಗಳು ಅಸ್ತಿತ್ವಕ್ಕೆ ಬಂದರೆ, ಮುಂದೆ ಬಡವರ ಮಕ್ಕಳಿಗೆ ಶಿಕ್ಷಣ ಕನಸಿನ ಮಾತಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಮಾರಕವಾಗಿರುವ ಈ ಯೋಜನೆಯನ್ನು ಸರ್ಕಾರ ಈ ಕೂಡಲೇ ರದ್ದುಪಡಿಸಬೇಕೆಂದು ಅವರು ಆಗ್ರಹಿಸಿದರು.
ಊರಿನ ಪೋಷಕರಾದ ಶರಣಪ್ಪ, ರಾಘವೇಂದ್ರ ಸೇರಿದಂತೆ ಹಲವರು ಮಾತನಾಡಿ ಸರಕಾರ ಈ ಯೋಜನೆ ಜಾರಿ ತಂದು ನಮ್ಮ ಹಳ್ಳಿಯ ಸುತ್ತ-ಮುತ್ತಲಿರುವ ಶಾಲೆಗಳನ್ನು ಮುಚ್ಚಲಿದ್ದಾರೆ. ಊರಿಗೆ ಮಕ್ಕಳನ್ನು ಕರೆ ತರಲು ಬಸ್ ಬಿಡುತ್ತೇವೆಂದು ಸರಕಾರ ಹೇಳುತ್ತದೆ. ಆದರೆ ಅದಕ್ಕೆ ನಮ್ಮಿಂದಲೇ ಹಣ ತೆಗೆದುಕೊಳ್ಳುತ್ತಾರೆ. ನಮ್ಮ ಊರಲ್ಲಿ ಈಗಾಗಲೇ ಇರುವ ಪ್ರಾಥಮಿಕ ಹಾಗೂ ಪ್ರಾಢಶಾಲೆ ಗಳಲ್ಲಿಯೇ ಸುಸಜ್ಜಿತ ಕೊಠಡಿ, ಶೌಚಾಲಯ, ಆಟದ ಮೈದಾನ, ಖಾಯಂ ಶಿಕ್ಷಕರ ಕೊರತೆ ಹೀಗೆ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಸರಕಾರಕ್ಕೆ ನಿಜವಾಗಿಯೂ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇದ್ದಲ್ಲಿ ಈಗಾಗಲೇ ಇರುವ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿ, ಸರಕಾರಿ ಶಾಲೆಗಳನ್ನು ನುಂಗುವ ಈ ಕೆಪಿಎಸ್ ನಮಗೆ ಬೇಡ, ಈ ಯೋಜನೆಯನ್ನು ಕೈ ಬಿಡದೇ ಇದ್ದಲ್ಲಿ, ಗ್ರಾಮಸ್ಥರೆಲ್ಲಾ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ವಹಿಸಿಕೊಂಡಿದ್ದರು. ಈ ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ರಾಜು, ಅನೇಕ ಪೋಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 500 ಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

