ಅಕ್ರಮ ಸರಾಯಿವಿರುದ್ಧಜಾಗೃತಿ: ಕೊಳ್ಳೂರು (ಎಂ) ರಾಜ್ಯದ ಮೊದಲ ಗ್ರಾಮ ಪಂಚಾಯತಿ; ಶ್ಲಾಘಿಸಿದ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರು
ಶಹಾಪುರ: ಅಕ್ರಮ ಸರಾಯಿ ಮಾರಾಟದ ವಿರುದ್ಧ ಜನ ಜಾಗೃತಿ ಮೂಡಿಸುವ ಮೂಲಕ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮ ಪಂಚಾಯತಿ ರಾಜ್ಯದಲ್ಲೇ ಮೊಟ್ಟ ಮೊದಲ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶ್ರೀ ಶರಣಪ್ಪ ಸಲದಾಪುರ ಅವರು ಕೊಳ್ಳೂರು (ಎಂ) ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಆಡಳಿತ ಮಂಡಳಿಯ ದಿಟ್ಟ ನಿರ್ಧಾರವನ್ನು ಶ್ಲಾಘಿಸಿದರು.
ಸ್ವಂತ ಜಿಲ್ಲೆಯ ಸಾಧನೆಗೆ ಸಂತಸ
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಶರಣಪ್ಪ ಸಲದಾಪುರ ಅವರು, ತಾವು ಮಂಡಳಿಯ ಅಧ್ಯಕ್ಷರಾದ ನಂತರ ತಮ್ಮ ತವರು ಜಿಲ್ಲೆ ಮತ್ತು ಸ್ವಂತ ತಾಲ್ಲೂಕಿನ ಗ್ರಾಮ ಪಂಚಾಯತಿಯೊಂದು ಸಂಯಮ ಮಂಡಳಿಯ ಆಶಯಕ್ಕೆ ತಕ್ಕಂತೆ ಸಾಮಾಜಿಕ ಚಿಂತನೆಯೊಂದಿಗೆ ಅಕ್ರಮ ಮದ್ಯ ಮಾರಾಟದ ವಿರುದ್ಧ ಜಾಗೃತಿಗೆ ಮುಂದಾಗಿರುವುದು ಅತೀವ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ರೆಡ್ಡಿ ರೇವು ನಾಯಕ ರಾಥೋಡ್ ಅವರಿಂದ ಮಾಹಿತಿ ಪಡೆದಾಗ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಲವೀಶ್ ಓರಾಡಿಯಾ ಅವರ ಆದೇಶ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಬಸವರಾಜ್ ಶರಭೈಯವರ ನಿರ್ದೇಶನ ಮತ್ತು ಸರ್ವ ಸದಸ್ಯರ ಅಭಿಮತದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಸಾಮಾಜಿಕ ದುಷ್ಪರಿಣಾಮಗಳ ಕುರಿತು ಕಳವಳ
ಅಧ್ಯಕ್ಷರ ಅನಿರೀಕ್ಷಿತ ಭೇಟಿಯ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪವಿತ್ರ ದೇವಿಂದ್ರಪ್ಪ ಚಲುವಾದಿ, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಸರಾಯಿ ಮಾರಾಟವು ಹಲವು ಸಾಮಾಜಿಕ ದುಷ್ಪರಿಣಾಮಗಳಿಗೆ ಕಾರಣವಾಗಿದೆ ಎಂದರು. ಅಕ್ರಮವಾಗಿ ಸಾಗಿಸುವ ಈ ಮದ್ಯ ನಕಲಿಯೋ ಅಸಲಿಯೋ ತಿಳಿಯದೆ ಬಡ ಗ್ರಾಮೀಣ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇದರಿಂದ ಅನೇಕ ಸಾವುಗಳು ಸಂಭವಿಸುತ್ತಿವೆ. ಅಲ್ಲದೆ, ಮಹಿಳೆಯರು ವಿಧವೆಯರಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಣಾಮಕಾರಿ ಕಾರ್ಯಾಚರಣೆಗೆ ಕರೆ
ಈ ಸಂದರ್ಭದಲ್ಲಿ ತಮ್ಮ ಹೋರಾಟದ ದಿನಗಳನ್ನು ಸ್ಮರಿಸಿದ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ, ಅಕ್ರಮ ಸರಾಯಿ ಮತ್ತು ಕುಡಿತದ ದುಷ್ಪರಿಣಾಮಗಳ ವಿರುದ್ಧ ಜನರು ಸಾಕಷ್ಟು ಜಾಗೃತರಾಗಬೇಕು. ಅದರಲ್ಲೂ ಮಹಿಳೆಯರು ಈ ಕುರಿತು ಪರಿಣಾಮಕಾರಿ ಹೋರಾಟಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
“ನಾನು ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ಅಕ್ರಮ ಮಾರಾಟ ಮತ್ತು ಮದ್ಯ ನಿಯಂತ್ರಣದ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆಗಳನ್ನು ರೂಪಿಸಲಿದ್ದೇನೆ,” ಎಂದು ಭರವಸೆ ನೀಡಿದರು. ಕೊಳ್ಳೂರು ಎಂ ಗ್ರಾಮ ಪಂಚಾಯತಿಯ ದಿಟ್ಟ ನಿರ್ಧಾರವನ್ನು ಶ್ಲಾಘಿಸಿದ ಅವರು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಭಿನಂದಿಸಿದರು.
ಸಭೆಯಲ್ಲಿ ಗ್ರಾಮದ ಚಿಂತಕರು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

