ಶಹಪುರ್ ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾದ ಘಟನೆ ನಡೆದಿದೆ. ಇದರಿಂದ ನೊಂದ ರೈತ ವಿಷ ಕುಡಿಯಲು ಯತ್ನಿಸಿದ್ದು, ಸಂಬಂಧಿಕರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಗ್ರಾಮದ ಸರ್ವೇ ನಂಬರ್ 67/1 ರಲ್ಲಿ ಜೈನುಲ್ ಅಬದ್ದೀನ್ ದಾದುಲ್ ಎಂಬ ರೈತರಿಗೆ ಸೇರಿದ ಹೊಲದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರೈಲ್ವೆ ಕಾಮಗಾರಿಯಿಂದ ಈ ಸ್ಥಿತಿ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಬೆಳೆ ಕಳೆದುಕೊಂಡು ದಿಕ್ಕುತೋಚದಂತಾದ ರೈತ ಜೈನುಲ್ ಅಬದ್ದೀನ್ ವಿಷ ಸೇವಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಅವರ ಸಂಬಂಧಿಕರು ತಕ್ಷಣ ಧಾವಿಸಿ ವಿಷದ ಬಾಟಲಿಯನ್ನು ಕಸಿದು ಅಪಾಯ ತಪ್ಪಿಸಿದ್ದಾರೆ.
ಘಟನೆಯ ನಂತರ, ರೈಲ್ವೆ ಇಲಾಖೆಯ ಸೈಟ್ ಇಂಜಿನಿಯರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಾದ ಆರ್.ಐ. (ಕಂದಾಯ ನಿರೀಕ್ಷಕರು) ಮತ್ತು ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಭೇಟಿಯ ವೇಳೆ, ಆಕ್ರೋಶಗೊಂಡ ರೈತರು ಅವರನ್ನು ಸುತ್ತುವರೆದು ಘೇರಾವ್ ಹಾಕಿದರು. ಸೂಕ್ತ ಪರಿಹಾರ ನೀಡುವವರೆಗೂ ಯಾವುದೇ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

