ನವದೆಹಲಿ, ನ. 13 (ಪಿಟಿಐ)– ಕಾರ್ ಸ್ಫೋಟ ಪ್ರಕರಣದ ನಂತರ ರಾಷ್ಟ್ರ ರಾಜಧಾನಿ ದೆಹಲಿ ಜನರಲ್ಲಿ ಆತಂಕ ಮನೆ ಮಾಡಿದೆ. ಒಂದು ಸಣ್ಣ ಶಬ್ದಕ್ಕೂ ಬೆಚ್ಚಿ ಬೀಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಬೆಳಿಗ್ಗೆ ನೈಋತ್ಯ ದೆಹಲಿಯ ಮಹಿಪಾಲಪುರ ಪ್ರದೇಶದಲ್ಲಿ ಬಸ್ ಟೈರ್ ಸ್ಫೋಟದಿಂದ ಉಂಟಾದ ದೊಡ್ಡ ಶಬ್ದವು ಸ್ಥಳೀಯರಲ್ಲಿ ಭಯ ಸೃಷ್ಟಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಪಾಲಪುರದ ರಾಡಿಸನ್ ಬಳಿ ಸ್ಫೋಟದಂತಹ ದೊಡ್ಡ ಶಬ್ದ ಕೇಳಿಬಂದಿದೆ ಎಂದು ಬೆಳಿಗ್ಗೆ 9.19 ಕ್ಕೆ ದೆಹಲಿ ಅಗ್ನಿಶಾಮಕ ಸೇವೆಗಳಿಗೆ ಕರೆ ಬಂದಿತು. ತಕ್ಷಣ ಅವರು ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳನ್ನು ಕಳುಹಿಸಿದರು.
ವ್ಯಾಪಕ ಪರಿಶೀಲನೆಯ ನಂತರವೂ ಅಧಿಕಾರಿಗಳಿಗೆ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಸಿಗಲಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ) ಅಮಿತ್ ಗೋಯೆಲ್ ತಿಳಿಸಿದ್ದಾರೆ. ಕರೆ ಮಾಡಿದವರನ್ನು ಸಂಪರ್ಕಿಸಿದಾಗ, ಗುರುಗ್ರಾಮ್‌ಗೆ ಹೋಗುವಾಗ ದೊಡ್ಡ ಶಬ್ದ ಕೇಳಿಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ವಿಚಾರಣೆಯ ಸಮಯದಲ್ಲಿ, ಧೌಲಾ ಕುವಾನ್ ಕಡೆಗೆ ಹೋಗುತ್ತಿದ್ದ ಡಿಟಿಸಿ ಬಸ್ಸಿನ ಹಿಂಭಾಗದ ಟೈರ್ ಸಿಡಿದಿದೆ ಮತ್ತು ಶಬ್ದ ಅಲ್ಲಿಂದ ಬಂದಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು ಎಂದು ಡಿಸಿಪಿ ಹೇಳಿದರು.
ಪರಿಸ್ಥಿತಿ ಸಾಮಾನ್ಯವಾಗಿದೆ ಮತ್ತು ಚಿಂತಿಸಲು ಏನೂ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

