ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಕೊಳಚೆ: ಸೂಗೂರು ಶಾಲಾ ಆವರಣದಲ್ಲಿ ವಿಷಪೂರಿತ ‘ಸರೋವರ’!
ಜನ ಆಕ್ರೋಶ ಸುದ್ದಿಜಾಲ ಸುರಪುರ (ಯಾದಗಿರಿ):ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ದುಸ್ಥಿತಿಗೆ ತಲುಪಿದ್ದು, ಈ ಶಾಲೆಗೆ ಬರುವ ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ಯೋಜನೆಗಳ ನಡುವೆಯೂ, ಶಾಲಾ ಆವರಣವು ಕಳೆದ ಹಲವು ತಿಂಗಳಿಂದ ಕಲುಷಿತ ನೀರಿನ ‘ಸರೋವರ’ವಾಗಿ ಮಾರ್ಪಟ್ಟಿದೆ.
ತಿಪ್ಪೆಗುಂಡಿಯ ನೀರು, ವಿಷಕಾರಿ ವಾತಾವರಣ!
ಸತತವಾಗಿ ತಿಂಗಳುಗಳಿಂದ ಶಾಲಾ ಆವರಣದಲ್ಲಿ ವಿಷಪೂರಿತ ನೀರು, ತಿಪ್ಪೆಗುಂಡಿಯ ಕೊಳಚೆ ನೀರು ಮತ್ತು ಗದ್ದೆ ನೀರು ತುಂಬಿಕೊಂಡಿದ್ದು, ಇಡೀ ಶಾಲಾ ವಾತಾವರಣವು ಗಬ್ಬು ನಾರುತ್ತಿದೆ. ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಬಿಸಿಯೂಟ, ಮೊಟ್ಟೆ, ಹಾಲು, ರಾಗಿ ಮಾಲ್ಟ್‌ನಂತಹ ಹಲವು ಯೋಜನೆಗಳನ್ನು ಕೊಟ್ಟರೂ, ಈ ಕಲುಷಿತ ವಾತಾವರಣದಿಂದಾಗಿ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದಾರೆ.
ಪಂಚಾಯತಿ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ
ಇದು ನಿಜಕ್ಕೂ ಅಘಾತಕಾರಿ ವಿಚಾರ. ಇಂತಹ ಗಂಭೀರ ಸಮಸ್ಯೆಯ ಕುರಿತು ಗ್ರಾಮಸ್ಥರು ಸತತವಾಗಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಕನಿಷ್ಠ ಕಿವಿಗೊಡದೆ ಸಂಪೂರ್ಣ ನಿರಾಕರಿಸಿದ್ದಾರೆ. ಸಮಸ್ಯೆಯು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆಯೇ ಹೊರತು, ಅದನ್ನು ತೆರವುಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ.
ಆರೋಗ್ಯದ ಮೇಲೆ ಗಂಭೀರ ಪರಿಣಾಮ
ನಿಂತ ಕೊಳಚೆ ನೀರು ಸೊಳ್ಳೆಗಳು ಮತ್ತು ಇತರ ರೋಗಕಾರಕ ಜೀವಿಗಳ ಉತ್ಪಾದನಾ ಕೇಂದ್ರವಾಗಿದೆ. ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುವ ಅಪಾಯ ಸೃಷ್ಟಿಯಾಗಿದೆ. ಮಕ್ಕಳು ಮನೆಯಲ್ಲಿದ್ದರೂ ಕೂಡ ರಕ್ಷಣೆ ನೀಡುವುದು ಹೇಗೆ? ಕನಿಷ್ಠ ಒಂದು ಗುಡಿಸಲನ್ನು ಸ್ವಚ್ಛವಾಗಿ ನೋಡಿಕೊಳ್ಳುವ ಪ್ರಜ್ಞೆ ಇರುವಾಗ, ನೂರಾರು ಮಕ್ಕಳ ಭವಿಷ್ಯವಿರುವ ಶಾಲೆಯನ್ನು ಹೀಗೆ ಕಲುಷಿತಗೊಳಿಸಿರುವುದು ನೋಡಿದರೆ, ಅಧಿಕಾರಿಗಳ ಜವಾಬ್ದಾರಿ ಎಷ್ಟಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ನಮ್ಮ ಆಗ್ರಹ:
ಕೂಡಲೇ ಯಾದಗಿರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಆವರಣದಲ್ಲಿ ತುಂಬಿರುವ ನೀರನ್ನು ತುರ್ತಾಗಿ ತೆರವುಗೊಳಿಸಿ, ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಜೊತೆಗೆ, ಕರ್ತವ್ಯ ಲೋಪ ಎಸಗಿರುವ ಪಂಚಾಯತಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ವರದಿ: ಸಚಿನ್‌ಕುಮಾರ ನಾಯಕ


