ಪಾಟ್ನಾ, ನ. 13: ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ (ನವೆಂಬರ್ 14) ಪ್ರಕಟಗೊಳ್ಳಲಿದ್ದು, ಹಲವು ಪ್ರಮುಖರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಮೈತ್ರಿಕೂಟ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಲು 122 ಸ್ಥಾನಗಳನ್ನು ಗೆಲ್ಲಬೇಕಿದೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
ದಾಖಲೆ ಮತದಾನ ಮತ್ತು ಮೈತ್ರಿಕೂಟಗಳ ವಿಶ್ವಾಸ
ಈ ಬಾರಿ ಬಿಹಾರದಲ್ಲಿ ದಾಖಲೆಯ 66.91% ಮತದಾನವಾಗಿದ್ದು, ಇದು ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಗರಿಷ್ಠವಾಗಿದೆ. ಮೊದಲ ಹಂತದ ಮತದಾನ 65.08% ಹಾಗೂ ಎರಡನೇ ಹಂತದ ಮತದಾನ 68.76% ರಷ್ಟಾಗಿತ್ತು. ದಾಖಲೆಯ ಮತದಾನ ನಡೆದಿರುವುದರಿಂದ ತಮ್ಮದೇ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರದಲ್ಲಿ ಎರಡೂ ಪಕ್ಷಗಳಿವೆ.
ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರೆ, ಮಹಾಘಟಬಂಧನ್ ಇದನ್ನು ತಳ್ಳಿಹಾಕಿದೆ. ಅಧಿಕ ಮತದಾನವು ಆಡಳಿತ ವಿರೋಧಿ ಅಲೆಯ ಸಂಕೇತವಾಗಿದೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿವೆ.
ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ರಾಜ್ಯದ 7.45 ಕೋಟಿ ಜನರು ಒಟ್ಟಾರೆ ಸ್ಪರ್ಧಿಸಿರುವ 2616 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಐದನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಾರೆಯೇ ಅಥವಾ ಲಾಲು ಕುಟುಂಬದ ಕುಡಿಯಾದ ತೇಜಸ್ವಿ ಯಾದವ್ ಹೊಸ ಚುಕ್ಕಾಣಿ ಹಿಡಿಯುತ್ತಾರೆಯೇ ಎಂಬ ಬಗ್ಗೆ ಇಡೀ ದೇಶ ಕಾತರದಿಂದ ಎದುರು ನೋಡುತ್ತಿದೆ.
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡು, ಸುಮಾರು 10 ಗಂಟೆ ವೇಳೆಗೆ ಮುಂದಿನ ಸರ್ಕಾರ ಯಾರು ರಚಿಸುತ್ತಾರೆ ಎಂಬ ಬಗ್ಗೆ ಮುನ್ನೋಟ ಸಿಗುವ ಸಾಧ್ಯತೆ ಇದೆ. ಈಗಾಗಲೇ 46 ಕೇಂದ್ರಗಳಲ್ಲಿ ಬಿಗಿ ಭದ್ರತೆ ನಡುವೆ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗವು ಖಾತ್ರಿ ಮತದಾರರ ಪಟ್ಟಿ ಮತ್ತು ಹೊಸ ಆಯಾಮದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಎರಡು ಹಂತಗಳಲ್ಲಿ ಚುನಾವಣೆ ಸಂಪನ್ನಗೊಂಡಿದೆ.
ಬಿಹಾರದ ಈ ಫಲಿತಾಂಶವು ದೇಶದ ರಾಜಕೀಯದಲ್ಲಿ ಹಲವು ಬದಲಾವಣೆಗಳಿಗೆ ನಾಂದಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

