Table of Contents
ಬೆಂಗಳೂರು, ನ. 27 – ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರ ಬಣ ಏಕಾಏಕಿ ಚುರುಕಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿತಂತ್ರ ರೂಪಿಸಲು ಇಂದು (ನ. 27) ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದೆ.
ನಗರದ ಶಿವಾನಂದ ಸರ್ಕಲ್‌ನಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ಬೆಳಿಗ್ಗೆ ನಡೆದ ಈ ನಿರ್ಣಾಯಕ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ವಿಧಾನ ಪರಿಷತ್‌ನ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಸಚಿವ ಸತೀಶ್ ಜಾರಕಿಹೊಳಿ ಅವರು ಸಭೆಯ ನೇತೃತ್ವ ವಹಿಸಿದರು.
ಅಧಿಕಾರ ಉಳಿಸಲು ಕಾರ್ಯತಂತ್ರಗಳ ಚರ್ಚೆ
ಸಭೆಯಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯದಂತೆ ತಡೆಯಲು ಅನುಸರಿಸಬೇಕಾದ ತುರ್ತು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಡಿ.ಕೆ. ಶಿವಕುಮಾರ್ ಬಣ ಸಕ್ರಿಯಗೊಂಡಿರುವ ಈ ಹಂತದಲ್ಲಿ, ತಾವೂ ಮೌನ ಮುರಿದು ಸಮಬಲದ ಹೋರಾಟವನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಪೂರ್ವಸಿದ್ಧತೆ
ಎರಡು-ಮೂರು ದಿನಗಳಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮಹತ್ವದ ಸಭೆ ನಡೆಯಲಿದ್ದು, ಅಲ್ಲಿ ಮುಖ್ಯಮಂತ್ರಿ ಹುದ್ದೆಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ. ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದ್ದೇ ಆದಲ್ಲಿ, ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಿದ್ದರಾಮಯ್ಯ ಬಣದಲ್ಲಿ ಗೊಂದಲವಿತ್ತು. ಈ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರ ಸಂದೇಶವನ್ನು ಸತೀಶ್ ಜಾರಕಿಹೊಳಿ ಅವರು ಬೆಂಬಲಿಗರಿಗೆ ರವಾನಿಸಿ, ಮುಂಬರುವ ಸವಾಲುಗಳಿಗೆ ಸಿದ್ಧರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಪಾತ್ರ ನಿರ್ಣಾಯಕ
ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನೇ ಭೇಟಿ ಮಾಡಿ ಬೆಂಬಲ ಯಾಚಿಸಿದ್ದರು. ಆದರೆ, “ತಮ್ಮ ನಿಲುವು ಸ್ಪಷ್ಟ. ತಾವು ಸಿದ್ದರಾಮಯ್ಯ ಅವರನ್ನು ಬಿಟ್ಟು ಬರುವುದಿಲ್ಲ” ಎಂದು ಸತೀಶ್ ಜಾರಕಿಹೊಳಿ ಅವರು ಖಡಾಖಂಡಿತವಾಗಿ ಹೇಳಿದ್ದರು. ಇದರ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಏಳೆಂಟು ಮಂದಿ ಶಾಸಕರೊಂದಿಗೆ ಔತಣಕೂಟ ನಡೆಸಿ, ಮುಖ್ಯಮಂತ್ರಿಯವರ ಬಣದ ಬಲವನ್ನು ಪ್ರದರ್ಶಿಸಿದ್ದರು. ಇಂದಿನ ಸಭೆಯ ನೇತೃತ್ವ ವಹಿಸಿರುವುದು, ರಾಜ್ಯ ರಾಜಕಾರಣದಲ್ಲಿ ಸಮಬಲದ ಹೋರಾಟದ ಸಂದೇಶವನ್ನು ರವಾನಿಸಿದೆ.

