ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್ ಸೇವೆಯಿಂದ ವಜಾ: ಪರಮೇಶ್ವರ್
ಬೆಳಗಾವಿ: ಕಳ್ಳತನ, ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಕಂಡುಬಂದರೆ ಅಂಥವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸುವ ಕಾನೂನು ಜಾರಿ ಮಾಡಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಶರವಣ.ಟಿ.ಎ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ಇಲಾಖೆಯ ಪೊಲೀಸರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಯಾರಾದರೂ ಇಂಥ ಕೃತ್ಯಗಳಲ್ಲಿ ಶಾಮೀಲಾಗಿರುವುದು ಕಂಡುಬಂದರೆ ಅವರನ್ನು ಸೇವೆಯಿಂದ ಅಮಾನತುಪಡಿಸುವುದು, ಬಂಧಿಸುವುದು, ನೋಟಿಸ್ ಕೊಡುವ ಪ್ರಕ್ರಿಯೆ ಜರುಗಿಸಬೇಕಾಗುತ್ತದೆ. ಅವರ ಮೇಲಿನ ಆರೋಪ ಸಾಬೀತಾದರೆ ಸೇವೆಯಿಂದ ವಜಾಗೊಳಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಈಗಾಗಲೇ ಗೃಹ ಇಲಾಖೆಯು ಕಾನೂನು ಇಲಾಖೆಗೆ ಪತ್ರವೊಂದನ್ನು ಬರೆದಿದೆ. ಇದಕ್ಕೆ ಅನುಮತಿ ಸಿಕ್ಕರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಪೊಲೀಸರು ಸೇವೆಯಿಂದಲೇ ವಜಾಗೊಳ್ಳಲಿದ್ದಾರೆ. ಯಾರ ವಿರುದ್ಧವೂ ನಾವು ಕರುಣೆಯನ್ನು ತೋರಿಸುವುದಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವುದಿಲ್ಲ. ಎಲ್ಲರಿಗೂ ನ್ಯಾಯವೊಂದೇ, ಕಾನೂನು ಒಂದೇ. ಮುಲಾಜಿಲ್ಲದೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಸೂಚಿಸಿರುವುದಾಗಿ ತಿಳಿಸಿದರು.
ಹಾಗಂತ ಇಡೀ ಪೊಲೀಸ್ ವ್ಯವಸ್ಥೆಯನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಇಲ್ಲವೇ ಇಲಾಖೆಯಲ್ಲಿರುವ ಎಲ್ಲರೂ ಅಪರಾಧಿಗಳು, ಕಳ್ಳರು, ವಸೂಲಿಗಾರರು ಎಂದು ಸಂಶಯದಿಂದ ನೋಡುವುದು ಬೇಡ. ನಮಲ್ಲಿರುವ ಅನೇಕ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅನೇಕರು ಪ್ರಾಮಾಣಿಕರಿದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಿಂದ ತೂಗುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರಮಟ್ಟಿಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇತರೆ ರಾಜ್ಯಗಳಲ್ಲಿನ ಕಾನೂನು, ಅಲ್ಲಿನ ಆಡಳಿತದ ಬಗ್ಗೆ ನಾನು ಮಾತನಾಡುವುದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾಕಷ್ಟು ಮುಂದೆ ಇದೆ ಎಂದು ಪ್ರಶ್ನಿಸಿದರು.

