ಬೆಂಗಳೂರು, ನ. 27:ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘವು ಕಾಂಗ್ರೆಸ್ ಹೈಕಮಾಂಡ್ ಅನ್ನು ಆಗ್ರಹಿಸಿದೆ. ಒಂದು ವೇಳೆ ಅವರಿಗೆ ನ್ಯಾಯ ಸಿಗದಿದ್ದರೆ ಸಮುದಾಯದ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶಿವಕುಮಾರ್ ಅವರು ಹಗಲಿರುಳು ಶ್ರಮಿಸಿದ್ದಾರೆ. ಅವರ ಶ್ರಮವನ್ನು ಪಕ್ಷವು ಪರಿಗಣಿಸಿ ಸೂಕ್ತ ‘ಕೂಲಿ’ ನೀಡಬೇಕು. ಪಕ್ಷದ ನಿಷ್ಠಾವಂತ ಕಟ್ಟಾಳುವಾದ ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದು ಒತ್ತಾಯಿಸಿದರು.
ಶಿವಕುಮಾರ್ ಅವರು ಸಮುದಾಯದಲ್ಲಿ ಪ್ರಬಲ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಈಗಾಗಲೇ ಐದು ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈಗ ಎರಡೂವರೆ ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೋ ಇಲ್ಲವೋ ಎಂಬ ಅನುಮಾನ ಶುರುವಾದ ಹಿನ್ನೆಲೆಯಲ್ಲಿ ಈ ಆಗ್ರಹ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಅನ್ಯಾಯವಾದರೆ ಚುನಾವಣೆಯಲ್ಲಿ ಪಾಠ:
ಸಂಘದ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪಗೌಡರು ಮಾತನಾಡಿ, ಶಿವಕುಮಾರ್ ಅವರು ಚುನಾವಣೆಗೆ ಮೊದಲು ಕೇಳಿದಂತೆ ಒಕ್ಕಲಿಗ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಪಕ್ಷ ಅಧಿಕಾರಕ್ಕೆ ಬರಲು ಶಿವಕುಮಾರ್ ಅವರ ಶ್ರಮ ಸಾಕಷ್ಟಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಮುಖ್ಯಮಂತ್ರಿಯಾಗುವ ಪರಿಪಾಠವೂ ಇದೆ. ಕಷ್ಟಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಶಿವಕುಮಾರ್ ಅವರಿಗೆ ಅವಕಾಶ ತಪ್ಪಬಾರದು.
ಒಂದು ವೇಳೆ ಅವರಿಗೆ ವಂಚನೆಯಾದರೆ, ನ್ಯಾಯಕ್ಕಾಗಿ ಹೋರಾಟ ಮಾಡುವುದರ ಜೊತೆಗೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಹೈಕಮಾಂಡ್ಗೆ ಮನವಿ:
ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್ ಅವರು ಮಾತನಾಡಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿವಕುಮಾರ್ ಅವರ ಸೇವಾ ಹಿರಿತನವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ ಅವರು ಮಾತನಾಡಿ, ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲು ಒಕ್ಕಲಿಗ ಸಮುದಾಯ ಕಾರಣವಾಗಿದೆ. ಇಡೀ ಸಮುದಾಯವು ಶಿವಕುಮಾರ್ ಅವರ ಬೆಂಬಲಕ್ಕೆ ಇದೆ. ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್, ಎಂ. ಪುಟ್ಟಸ್ವಾಮಿ, ಸಹಾಯಕ ಕಾರ್ಯದರ್ಶಿ ಡಾ.ಡಿ.ಕೆ. ರಮೇಶ್, ಖಜಾಂಚಿ ಕೆ.ವಿ. ಶ್ರೀಧರ್, ನಿರ್ದೇಶಕರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಅಭಿವೃದ್ಧಿ ಘೋಷಣೆ:
ಇದೇ ವೇಳೆ, ಒಕ್ಕಲಿಗರ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಂಘದ ಅಭಿವೃದ್ಧಿಗಾಗಿ ಎಲ್ಲಾ 35 ನಿರ್ದೇಶಕರು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಸರ್ವ ಸದಸ್ಯರ ಸಭೆ, ಬೈಲಾ ತಿದ್ದುಪಡಿ, ಎಲ್ಲಾ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯ, ಕೃಷಿ ಕಾಲೇಜು, ಮತ್ತೊಂದು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಂಘದ ಮುಖಂಡರು ತಿಳಿಸಿದರು.

