ಯಾದಗಿರಿ:ಡಿ:17: ಜಿಲ್ಲೆಯಲ್ಲಿನ ಶಾಲಾ,ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳ ಆವರಣದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ಮಾಡದಂತೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ತಂಬಾಕು ನಿಯಂತ್ರಣ ಕಾಯ್ದೆ ಗಳು ಅನುಷ್ಠಾನ ಕುರಿತಂತೆ ತಾಲೂಕು ಮಟ್ಟದ ಹಾಗೂ ಪ್ರಾಧಿಕೃತ ತನಿಖಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹಾಗೂ ಯುವಜನಾಂಗ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಬೇಕು. ಮದ್ಯಪಾನ, ಮಾದಕವಸ್ತುಗಳು ಹಾಗೂ
ಈ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮ ಘೋರವಾಗಿದ್ದು, ಕ್ಯಾನ್ಸರ್ ಹಾಗೂ ಸಾವಿಗೂ ಕಾರಣವಾಗುವುದರಿಂದ ಇದರಿಂದ ದೂರ ಇರುವಂತೆ ಅವರು ಸಲಹೆ ನೀಡಿದರು.
ತಂಬಾಕು ನಿಯಂತ್ರಣ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ತಂಬಾಕು, ತಂಬಾಕು ಉತ್ಪನ್ನಗಳ, ಮಾರಾಟ ಮಾಡುವವರ, ಕಾಯ್ದೆ ಅನ್ವಯ ಮಾಹಿತಿ ಫಲಕ ಹಾಕದೇ ಇರುವವರ ವಿರುದ್ಧ ನಿರಂತರ ದಾಳಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.ಆಶಾ, ಅಂಗನವಾಡಿ ಕಾರ್ಯಕರ್ತೆಯರು,ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ, ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೂಕ್ತ ಅರಿವು ಮೂಡಿಸುವಂತೆ
ಅವರು ಸೂಚಿಸಿದರು.
ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಶ್ರೀ ಮಹಾಂತೇಶ ಉಳ್ಳಾಗಡ್ಡಿ ಅವರು ಕೋಟ್ಪಾ ಕಾಯ್ದೆ -2003 ರಿಂದ ಜಾರಿಯಲ್ಲಿದೆ. ಕೋಟ್ಪಾ ತಿದ್ದುಪಡಿ 2024 ಕಾಯ್ದೆ ಅನ್ವಯ ದಂಡ ಹಾಗೂ ಶಿಕ್ಷೆಗೆ ಅವಕಾಶವಿದೆ. ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಹಾಗೂ 1000 ರೂ. ಗಳವರೆಗೆ ದಂಡವಿದೆ. 21 ವರ್ಷದೊಳಗಿನ ಮಕ್ಕಳು ಬೀಡಿ, ಸಿಗರೇಟು,ಗುಟಖಾ
ತಂಬಾಕು ಉತ್ಪನ್ನಗಳ ಸೇವಿಸಬಾರದು ಹಾಗೂ ಮಾರಾಟ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ, ತಂಬಾಕು ಉತ್ಪನ್ನಗಳ ಸೇವನೆಗೆ ನಿಷೇಧವಿದ್ದು,
ಪಾನ್ ಗುಟ್ಕಾ ಉಗುಳುವದಕ್ಕೂ ಕಾಯ್ದೆಯಡಿ ದಂಡ ಶಿಕ್ಷೆಗೆ ಅವಕಾಶವಿದೆ. ಶ್ರೀ ವಿಜಯಕುಮಾರ್ ಅವರೂ ಈ ವಿವಿಧ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ ಮಾತನಾಡಿದರು. ಜಿಲ್ಲಾ ಆರ್. ಸಿ.ಹೆಚ್ ಅಧಿಕಾರಿ ಮಲ್ಲಪ್ಪ, ತಾಲೂಕು ಆರೋಗ್ಯಾಧಿಕಾರಿ ಹಣುಮಂತ ರೆಡ್ಡಿ,ಡಿಎಲ್ಓ ಕಾರ್ಯಕ್ರಮ ಅಧಿಕಾರಿ ಬಾ.ಪದ್ಮಾನಂದ ಗಾಯಕವಾಡ, ಜಿಲ್ಲಾ ಕನ್ಸಲ್ಟಂಟ್ ಮಹಾಲಕ್ಷ್ಮಿ ಸಜ್ಜನ್
ಉಪಸ್ಥಿತರಿದ್ದರು.ಉಪ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಸ್ವಾಗತಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಯಶಸ್ವಿಯಾಗಿ ನೆರವೇರಿಸಿದ್ದಕ್ಕಾಗಿ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಅವರಿಗೆ ಸನ್ಮಾನಿಸಲಾಯಿತು.

