ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ
ಕೊಪ್ಪಳ : ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಜಿಲ್ಲಾಧಿಕಾರಿ ಸುರೇಶ್ ಬಿ.ಹಿಟ್ನಾಳ ಅವರ ಮುಖಾಂತರ ಗುರುವಾರ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘಿಸಿ ಸಮಾಜಘಾತಕ ಶಕ್ತಿಗಳು ನಡೆಸುವ ಕೃತ್ಯಗಳಿಗೆ ಕಡಿವಾಣ ಹಾಕಿ. ಅಲ್ಪಸಂಖ್ಯಾತರಿಗೆ ವಿಶೇಷ ರಕ್ಷಣೆ ನೀಡುವಂತೆ ಕ್ರಮ ಕೈಗೊಳ್ಳಬೇಕು.
ರಾಜ್ಯದ ಕರಾವಳಿಯಲ್ಲಿ ಗೋಹತ್ಯೆ ನೆಪದಲ್ಲಿ ಅಲ್ಪಸಂಖ್ಯಾತರ ಅಮಾಯಕ ಜನರಿಗೆ ಮಾನಸಿಕ ಹಿಂಸೆ.ಹಲ್ಲೆ.ಕೊಲೆ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಇತ್ತೀಚೆಗೆ ಜಾನುವಾರುಗಳ ರಕ್ಷಣೆ ಮಾಡುವ ನಾಟಕ ಮಾಡುತ್ತಾ ವಾಹನ ಪರಿಶೀಲನೆ ಮಾಡುತ್ತಿದ್ದರೂ ಅಂಥವರಿಗೆ ಬೆಂಬಲ ನೀಡಿದಂತೆ ಪೊಲೀಸರು ನಿಂತು ಅಸಹಾಯಕರಂತೆ ನೋಡುತ್ತಿದ್ದ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲರೂ ನೋಡಿದ್ದಾರೆ.ನೈತಿಕ ಪೊಲೀಸ್ ಗಿರಿ ನಡೆಸಲು ಅವಕಾಶ ಕಲ್ಪಿಸಿದಂತೆ ಕಾಣುತಿತ್ತು.ರಾಜ್ಯದಲ್ಲಿ ಇಂಥಾ ಘಟನೆಗಳನ್ನು ಮುಂದೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ 2017 ರಲ್ಲಿ ಖಾಸಗಿ ಶಾಲಾ ಕಟ್ಟಡವೊಂದರಲ್ಲಿ ಪ್ರಾರಂಭಿಸಿದ ಮೂರು ವರ್ಷಗಳಲ್ಲಿ ಕಟ್ಟಡ ಮಳೆಗೆ ಸೋರುತ್ತಿದ್ದರಿಂದ ಅಲ್ಲಿಂದ ಇಂದಿರಾ ಕ್ಯಾಂಟಿನ್ ಹಿಂದಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಕೆ.ಪಿ.ಎಸ್. ಶಾಲೆ ಕಟ್ಟಲು ಈಗಿರುವ ಕಟ್ಟಡವು ಕೆಡವತ್ತಿದ್ದು ಇಲ್ಲಿ ಎರಡು ವರ್ಗಗಳು ಮತ್ತು ಸರ್ದಾರ್ ಗಲ್ಲಿ ಶಾಲಾ ಕಟ್ಟಡದಲ್ಲಿ ಮೂರು ವರ್ಗಗಳು ನಡೆಯುತಿದ್ದು.ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತುಂಬ ತೊಂದರೆ ಆಗುತ್ತಿದೆ. ತಕ್ಷಣ ವ್ಯವಸ್ಥಿತ ಯೋಜನಾ ಬದ್ಧ ಶಾಶ್ವತ ಕಟ್ಟಡ ಮತ್ತು ಆಟದ ಮೈದಾನ ಒದಗಿಸಿ.ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ಒದಗಿಸಲು ಆಗ್ರಹಿಸುತ್ತೇವೆ. ರಾಜ್ಯಾದಾದ್ಯಂತ ಮೌಲಾನಾ ಆಝಾದ್ ಶಾಲೆಗಳಿಗೆ ಶಾಶ್ವತ ಕಟ್ಟಡ ಮತ್ತು ಖಾಯಂ ಶಿಕ್ಷಕರ ನೇಮಕಾತಿ ಆಗಬೇಕು.
ನಗರದ ಮರ್ದಾನ್ ಎ ಗೈಬ್ ದರ್ಗಾದ ಪರಿಸರದಲ್ಲಿ ಅನೇಕ ವರ್ಷಗಳಿಂದ ಶಾದಿ ಮಹಲ್ ಕಟ್ಟಡವು ಅವೈಜ್ಞಾನಿಕವಾಗಿದ್ದು ಮತ್ತು ಅಪೂರ್ಣಗೊಂಡಿದೆ ತಕ್ಷಣ ವೈಜ್ಞಾನಿಕವಾದ ರೀತಿಯಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿ ಅಲ್ಪಸಂಖ್ಯಾತರ ಬಳಕೆಗೆ ಒದಗಿಸಬೇಕು.ಆಝಾದ್ ವೃತ್ತದಲ್ಲಿ ಘೋಷಣೆಯಾದ ಗೋಷ ಆಸ್ಪತ್ರೆ ತಕ್ಷಣ ಪ್ರಾರಂಭಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಹಚ್ಚುವ ರೀತಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು.ದಶಕಗಳ ಹಿಂದೆ ನಿಗದಿಪಡಿಸಿದ ಸಾಲದ ಮೊತ್ತ ಪರಿಷ್ಕರಿಸಿ ನಾಲ್ಕು ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಮೌಲಾನಾ ಆಝಾದ್ ಶಾಲೆಗಳು ಎಲ್.ಕೆ.ಜಿ.ಯಿಂದ ಪಿಯುಸಿ ವರೆಗೆ ನಡೆಯುತ್ತಿದ್ದು. ವಿವಿಧ ಆಧುನಿಕ ತಂತ್ರಜ್ಞಾನದ ತಾಂತ್ರಿಕ ಪದವಿಗಳನ್ನು ಪ್ರಾರಂಭಿಸಬೇಕು. ಅಲ್ಪಸಂಖ್ಯಾತರಿಗೆ ಈ ಹಿಂದೆ ಇದ್ದಂತೆ ಭೂ ಒಡೆತನ ಯೋಜನೆ ಮತ್ತೆ ಜಾರಿಗೆ ತರುವ ಮೂಲಕ ವಿಶ್ವ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಗೆ ನಿಜವಾದ ಅರ್ಥ ಬರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ. ಮಹೆಬೂಬ್ ಕುದರಿ ಮೂತಿ. ನಯೀಮ್ ಗೌರಿಪೂರ ಮುಂತಾದವರು ಆಗ್ರಹಿಸಿ ಮನವಿ ಸಲ್ಲಿಸಿದರು.
