3
ಇತ್ತೀಚಿನ ಅವಘಡಗಳ ಹಿನ್ನೆಲೆಯಲ್ಲಿ ಕಟ್ಟಡಗಳ ಮೇಲಿನ ವೀಕ್ಷಣೆಗೆ ನಿರ್ಬಂಧ, ‘ಪಾಸ್’ ಕಡ್ಡಾಯ
ಮೈಸೂರು, ಅಕ್ಟೋಬರ್ 1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಜಂಬೂ ಸವಾರಿ ಮೆರವಣಿಗೆ ಮತ್ತು ಪಂಜಿನ ಕವಾಯತು ಕಾರ್ಯಕ್ರಮಗಳಿಗೆ ಕ್ಷಣಗಣನೆ ಆರಂಭವಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣ ಹಾಗೂ ನಟ ವಿಜಯ್ ರ್ಯಾಲಿಯಲ್ಲಿನ ಅವಘಡಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ಅವರು ತಿಳಿಸಿದ್ದಾರೆ.
ಪಾಲಿಸಲೇಬೇಕಾದ ಮುಖ್ಯ ನಿಯಮಗಳು:
- ಪಾಸ್ ಕಡ್ಡಾಯ: ಜಂಬೂ ಸವಾರಿ ಮತ್ತು ಪಂಜಿನ ಕವಾಯತು ವೀಕ್ಷಿಸಲು ಬರುವವರಿಗೆ ಕಡ್ಡಾಯವಾಗಿ ನಿಗದಿತ ಪಾಸ್ ಇದ್ದರೆ ಮಾತ್ರ ಪ್ರವೇಶ ನೀಡಲಾಗುವುದು. ಪಾಸ್ ಇಲ್ಲದವರಿಗೆ ಅವಕಾಶ ಇರುವುದಿಲ್ಲ.
- ಶಿಥಿಲ ಕಟ್ಟಡಗಳ ಮೇಲೆ ನಿರ್ಬಂಧ: ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಹಲವು ಶಿಥಿಲಗೊಂಡ ಕಟ್ಟಡಗಳಿದ್ದು, ಭದ್ರತಾ ದೃಷ್ಟಿಯಿಂದ ಅಂತಹ ಕಟ್ಟಡಗಳ ಮೇಲೆ ಏರಿ ವೀಕ್ಷಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
- ವಾಹನ ನಿಲುಗಡೆ: ಕಾರ್ಯಕ್ರಮಕ್ಕೆ ಆಗಮಿಸುವವರು ನಿಗಧಿತ ಸ್ಥಳದಲ್ಲೇ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು.
- ಪೊಲೀಸರ ಸಲಹೆ ಪಾಲಿಸಿ: ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿ ನೀಡುವ ಸಲಹೆ ಮತ್ತು ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ಸಾರ್ವಜನಿಕರಲ್ಲಿ ಆಯುಕ್ತರು ಮನವಿ ಮಾಡಿದ್ದಾರೆ.
