ರಾಯಚೂರು/ಸಿಂಧನೂರು: ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟದ ಕುರಿತು ಸಾಮಾಜಿಕ ಹೋರಾಟಗಾರ ಶರಣಪ್ಪರೆಡ್ಡಿ ಲಖಣಾಪುರ ಅವರು ನೀಡಿದ ದೂರಿಗೆ ತಕ್ಷಣವೇ ಸರ್ಕಾರ ಸ್ಪಂದಿಸಿದೆ. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ.
ಶರಣಪ್ಪರೆಡ್ಡಿ ಲಖಣಾಪುರ ಅವರು ಕಳೆದ ವಾರ, ಅಂದರೆ ಜುಲೈ 23, 2025 ರಂದು, ಮಾನ್ಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಸಳ್ಳಿ ಗ್ರಾಮ ಮತ್ತು ಮಸ್ಕಿ ತಾಲ್ಲೂಕಿನ ಬುದ್ದಿನ್ನಿ ಹಾಗೂ ಜಾಲವಾಡಗಿ ಗ್ರಾಮಗಳ ಪಟ್ಟಾ ಜಮೀನಿನಲ್ಲಿ ಮಂಜೂರಾಗಿರುವ ಮರಳು ಗುತ್ತಿಗೆ ಪ್ರದೇಶಗಳಲ್ಲಿ ಸಕ್ರಮದ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮಿತಿಮೀರಿದ ಸಾಗಾಣಿಕೆ ನಡೆಯುತ್ತಿದೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಈ ದೂರಿನ ಗಂಭೀರತೆಯನ್ನು ಅರಿತ ಸರ್ಕಾರ, ಹೆಚ್ಚುವರಿ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉತ್ತರ ವಲಯ ಇವರ ಆದೇಶದ ಮೇರೆಗೆ ತಕ್ಷಣವೇ ಕ್ರಮ ಕೈಗೊಂಡಿದೆ. ಅದರಂತೆ, ಜುಲೈ 30, 2025 ರಂದು, ಬಳ್ಳಾರಿ ವಲಯದ ಹೆಚ್ಚುವರಿ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅವರು ತನಿಖಾ ತಂಡವನ್ನು ರಚಿಸಿದ್ದಾರೆ. ಈ ತಂಡವು ಬಳ್ಳಾರಿ ಕಚೇರಿಯ ಅನುಭವಿ ಸಿಬ್ಬಂದಿಗಳನ್ನು ಒಳಗೊಂಡಿದ್ದು, ದೂರಿನಲ್ಲಿ ಉಲ್ಲೇಖಿಸಲಾದ ಪ್ರದೇಶಗಳಿಗೆ ಭೇಟಿ ನೀಡಿ, ಜಂಟಿ ಸ್ಥಳ ಪರಿಶೀಲನೆ ಮತ್ತು ಸಮಗ್ರ ತನಿಖೆ ನಡೆಸಲಿದೆ ಎಂದು ಶರಣಪ್ಪರೆಡ್ಡಿ ಲಖಣಾಪುರ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದ್ದ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ತನಿಖಾ ತಂಡದ ವರದಿ ಮತ್ತು ನಂತರದ ಕ್ರಮಗಳ ಕುರಿತು ಕಾದು ನೋಡಬೇಕಿದೆ.

