ಜನ ಆಕ್ರೋಶ ಸುದ್ದಿಜಾಲ
ಯಾದಗಿರಿ ಜಿಲ್ಲೆ, ಸುರಪುರ:ಸುರಪುರ ಬಸ್ ನಿಲ್ದಾಣದಲ್ಲಿ ನಿನ್ನೆ ಸಾಯಂಕಾಲ ಶಾಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬೈರಿಮರಡಿ, ಬಾದಾಪುರ, ಶೆಟ್ಟಿಕೇರ ದೊಡ್ಡಿ ಮತ್ತು ಶೆಟ್ಟಿಕೇರ ಮುಂತಾದ ಭಾಗಗಳಿಗೆ ಬಸ್‌ಗಳು ತಡವಾಗಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾಧಾರಣವಾಗಿ ಸಂಜೆ 4:30 ಗಂಟೆಗೆ ಬರುವ ಬಸ್‌ಗಳು 6:30 ಗಂಟೆಗೆ ಮಾತ್ರ ಬರುತ್ತಿರುವುದರಿಂದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಮನೆ ತಲುಪಲು ರಾತ್ರಿ ಆಗುತ್ತಿದೆ ಎಂದು ಅವರು ದೂರಿದರು.
ವಿದ್ಯಾರ್ಥಿಗಳು ಮನವಿ ಪತ್ರದ ಮೂಲಕ,
“ಶಾಲೆ ಮುಗಿದ ನಂತರ ಹಳ್ಳಿಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಸಂಜೆ 4:30ಕ್ಕೆ ಸರಿಯಾದ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಸುರಕ್ಷತೆಗೆ ಧಕ್ಕೆಯುಂಟಾಗುವ ಭೀತಿ ಇದೆ,” ಎಂದು ಬಸ್ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಆರಕ್ಷಕ ನಿರೀಕ್ಷಕರಾದ ಉಮೇಶ್ ನಾಯಕ, ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಕಾರ್ಯಾಧ್ಯಕ್ಷ ಶಿವರಾಜ ವಗ್ಗರ್, ಯುವ ಘಟಕ ಅಧ್ಯಕ್ಷ ರವಿ ನಾಯಕ, ರಾಜು ಬಡಿಗೇರ, ಬೈರಿಮರಡಿ ಗ್ರಾಮ ಪಂಚಾಯಿತಿ ಸದಸ್ಯ ಬಲಭೀಮ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಗೆ ಹಾಜರಿದ್ದರು.

