Table of Contents
ಕೊಡೆಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರು ವಂದನ: ಶಿಕ್ಷಕರು ದೇಶದ ನಿಜವಾದ ಹೀರೋಗಳು
ಜನ ಆಕ್ರೋಶ ಸುದ್ದಿ ಹುಣಸಗಿ: ಗುರು ಶಿಷ್ಯರ ಬಾಂಧವ್ಯವು ಭವ್ಯವಾಗಿದ್ದು, ಶಿಕ್ಷಕರು ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ದೇಶದ ನಿಜವಾದ ಹೀರೋಗಳು ಎಂದು ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪನವರು ಅಭಿಪ್ರಾಯಪಟ್ಟರು.
ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 2002-03ನೇ ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಗುರು-ಶಿಷ್ಯ ಸಂಬಂಧ ಐತಿಹಾಸಿಕ: ಶಿವಕುಮಾರ ಸ್ವಾಮೀಜಿ
ಪರಮಪೂಜ್ಯ ದುರದಂಡೇಶ್ವರ ವಿರಕ್ತ ಮಹಾಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರು ಮಾತನಾಡಿ, ನಮ್ಮ ಭಾರತೀಯ ಸಂಪ್ರದಾಯದಲ್ಲಿ ಗುರು-ಶಿಷ್ಯರ ಬಾಂಧವ್ಯವು ಐತಿಹಾಸಿಕವಾಗಿದೆ. ಶಿಕ್ಷಣವು ಸಂಸ್ಕಾರವನ್ನು ನೀಡಿ, ಸಮಾಜಕ್ಕೆ ಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು. ಹಳೆ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ನಡೆಸುವುದು ಮುಂದಿನ ಪೀಳಿಗೆಗೆ ಅಡಿಪಾಯವಾಗಲಿದೆ ಎಂದು ತಿಳಿಸಿದರು.
ಅಜರಾಮರವಾದ ಸಂಬಂಧ
ಶಿಕ್ಷಕರಾದ ವೀರಣ್ಣ ಬೆಳ್ಳುಬ್ಬಿ ಮತ್ತು ಎನ್.ಆರ್. ಜಾಲಿಬೆಂಚಿ ಮಾತನಾಡಿ, ಗುರು-ಶಿಷ್ಯರ ಸಂಬಂಧವು ಯಾವತ್ತೂ ಅಜರಾಮರ. ವಿದ್ಯಾರ್ಥಿಗಳು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅವರು ನಮ್ಮ ಶಿಷ್ಯಂದಿರು ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ ಎಂದರು. ಹಳೆ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಬಿ.ಎಸ್. ಹಂಚಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಗುರು ವೃಂದಕ್ಕೆ ವಾದ್ಯಮೇಳದೊಂದಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಸಮಾರಂಭದಲ್ಲಿ ರಾಜಾ ವೆಂಕಟಪ್ಪ ನಾಯಕ್ ಜಹಗೀರದಾರ, ರಾಣಿ ರಂಗಮ್ಮ ಜಹಗೀರದಾರ, ಶಿಕ್ಷಕರು, ಮತ್ತು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾನಂದ ಹಾವೇರಿ ಕಾರ್ಯಕ್ರಮವನ್ನು ನೆರವೇರಿಸಿದರು. ಪ್ರಭು ಹಿಕ್ಕಲಗುತ್ತಿ ಸ್ವಾಗತಿಸಿದರೆ, ಎಸ್.ಎಸ್. ಮಾರನಾಳ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸುದ್ದಿಗಳನ್ನು ಕಳುಹಿಸಲು ಈ ನಂಬರ್ ಮತ್ತು ಇಮೇಲಿಗೆ ಸಂಪರ್ಕಿಸಿ 9845968164 janaakrosha@gmail.com

