ನಿರಾಶ್ರಿತರ ಆಶ್ರಯ ಕೇಂದ್ರ ಬಹಳ ಅನುಕೂಲ: ತಿಪ್ಪಮ್ಮ ಬಿರಾದಾರ
ವಿಶ್ವ ವಸತಿ ರಹಿತರ ದಿನಾಚರಣೆ ಅಂಗವಾಗಿ ಸುರಪುರದಲ್ಲಿ ಕಾರ್ಯಕ್ರಮ
ಜನ ಆಕ್ರೋಶ ಸುದ್ದಿ ಸುರಪುರ: ನಗರದಲ್ಲಿರುವ ನಿರಾಶ್ರಿತರ ವಸತಿ ರಹಿತ ಉಚಿತ ಆಶ್ರಯ ಕೇಂದ್ರವು ಬಡವರಿಗೆ ಬಹಳ ಅನುಕೂಲವಾಗಿದೆ ಎಂದು ಸಮುದಾಯ ಸಂಘಟಕರಾದ ತಿಪ್ಪಮ್ಮ ಬಿರಾದಾರ ಅವರು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಸುರಪುರ ನಗರಸಭೆ ಮತ್ತು ವಿಶ್ವ ಗಂಗಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಮಾತನಾಡಿ, ರಾಜ್ಯದಲ್ಲಿ ಸೂರಿಲ್ಲದೇ ಬದುಕುತ್ತಿರುವ ಎಷ್ಟೋ ನಿರಾಶ್ರಿತರಿಗೆ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇಂತಹವರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬಸ್ ಸಿಗದಿದ್ದಾಗ ದುಬಾರಿ ಲಾಡ್ಜ್‌ಗಳಲ್ಲಿ ಇರಲು ಸಾಧ್ಯವಾಗದೆ ರಾತ್ರಿ ಹೊತ್ತು ಬಸ್ ನಿಲ್ದಾಣ ಮತ್ತು ಪುಟ್‌ಪಾತ್‌ಗಳಲ್ಲಿ ಮಲಗುವ ಪರಿಸ್ಥಿತಿ ನಿರಾಶ್ರಿತರಿಗೆ ಬರಬಾರದು. ಚಳಿ ಮತ್ತು ಸೊಳ್ಳೆಗಳಿಂದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಆಶ್ರಯ ಕೇಂದ್ರವನ್ನು ತೆರೆಯಲಾಗಿದೆ. ಇದು ಈ ವರ್ಗದವರಿಗೆ ತುಂಬಾ ಉಪಯುಕ್ತವಾಗಿದೆ ಎಂದು ತಿಪ್ಪಮ್ಮ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಆಶ್ರಯ ಶಾಖೆಯ ವ್ಯವಸ್ಥಾಪಕ ಚಿದಾನಂದ, ದೇವರೆಡ್ಡೆಪ್ಪಗೌಡ, ಪಾಚಪಯ್ಯ ಬಲಭೀಮ, ರೇಣುಕಾ, ಸಿಆರ್‌ಪಿಗಳಾದ ಗೀತಾ ವಾರಿ, ಶ್ರೀದೇವಿ ಹಿರೇಮಠ, ವೆಂಕಟೇಶ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಆಶ್ರಯ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

