ನಕಲಿ ಬಿಲ್: ಯಾಳವಾರ ಗ್ರಾ.ಪಂ.ನಲ್ಲಿ ₹1.34 ಕೋಟಿ ಲೂಟಿ ಆರೋಪ!
ಜನ ಆಕ್ರೋಶ ಸುದ್ದಿ ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಾಳವಾರ ಗ್ರಾಮ ಪಂಚಾಯತಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಪಂಚಾಯತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಯವರು (ಪಿಡಿಒ) ಸೇರಿಕೊಂಡು ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ಒಂದು ಕೋಟಿ ಮೂವತ್ತನಾಲ್ಕು ಲಕ್ಷ ರೂಪಾಯಿ (₹1.34 ಕೋಟಿ) ಹಣವನ್ನು ಸೆಳೆದಿರುವುದಾಗಿ ಆರೋಪಿಸಲಾಗಿದೆ.
ಗ್ರಾಮ ಪಂಚಾಯತಿಯ 15ನೇ ಹಣಕಾಸು ಅನುದಾನದ ಹಣವನ್ನು ನಕಲಿ ಬಿಲ್‌ಗಳ ಮೂಲಕ ಲೂಟಿ ಮಾಡಲಾಗಿದೆ. ಯಾವುದೇ ಸರಕು ಖರೀದಿ ಮಾಡದೆ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದೆ, ಏಜೆನ್ಸಿಗಳಿಗೆ ಕಮಿಷನ್ ನೀಡಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಲಕಮ್ಮ ಯಮುನಪ್ಪ ಮತ್ತು ಅಭಿವೃದ್ಧಿ ಅಧಿಕಾರಿಯಾದ ಅರವಿಂದ ಚವ್ಹಾಣ ಅವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲಾ ಪಂಚಾಯತಿಗೆ ದೂರು:
ಈ ಅಕ್ರಮದ ಕುರಿತು ಯಾಳವಾರದ ನಿವಾಸಿ ಶರಣಪ್ಪರೆಡ್ಡಿ ಕೊಳ್ಳಿ ಲಖಣಾಪುರ ಎನ್ನುವವರು ಜಿಲ್ಲಾ ಪಂಚಾಯತಿಗೆ ದೂರು ನೀಡಿದ್ದಾರೆ. ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (ಸಿಇಒ) ನೀಡಿರುವ ದೂರಿನಲ್ಲಿ, ಈ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಈ ಗಂಭೀರ ಪ್ರಕರಣವನ್ನು ನಿರ್ಲಕ್ಷಿಸಿದರೆ, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಭಾರಿ ಹಣಕಾಸು ಅಕ್ರಮದಿಂದಾಗಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ. ಇದರಿಂದ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿದ್ದು, ಜಿಲ್ಲಾ ಪಂಚಾಯತಿ ಮುಂದಿನ ಕ್ರಮ ಕೈಗೊಳ್ಳುವುದನ್ನು ಕಾದು ನೋಡುತ್ತಿದ್ದಾರೆ.

