ಸಮಾನತೆ ಮತ್ತು ಭ್ರಾತೃತ್ವದಿಂದ ಬದುಕಲು ವಾಲ್ಮೀಕಿ ಸಂದೇಶ: ಶಾಸಕ ಕಂದಕೂರ ಕರೆ
ಜನ ಆಕ್ರೋಶ ಸುದ್ದಿ ಜಾಲ ಗುರುಮಠಕಲ್ (ಯಾದಗಿರಿ ಜಿಲ್ಲೆ):ಗುರುಮಠಕಲ್ ಮತಕ್ಷೇತ್ರದ ಮಾನ್ಯ ಶಾಸಕರು ಹಾಗೂ ಜನಪ್ರಿಯ ನಾಯಕರಾದ ಶ್ರೀ ಶರಣಗೌಡ ಕಂದಕೂರ ಅವರು ಇಂದು ನಾಗರಬಂಡಾ ಗ್ರಾಮದಲ್ಲಿ ಆದಿಕವಿ ಭಗವಾನ್ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಸಮಾರಂಭದ ನಂತರ ಮಾತನಾಡಿದ ಶಾಸಕರು, ಆದಿಕವಿ ವಾಲ್ಮೀಕಿಯವರು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಸಮಾಜದ ಕುಲಗುರುಗಳು ನೀಡಿದ ಆದರ್ಶಗಳ ಅಡಿಯಲ್ಲಿ ನಾವೆಲ್ಲರೂ ಜೀವನ ಸಾಗಿಸಬೇಕು. ಐತಿಹಾಸಿಕ ಮಹಾಪುರುಷರ ಆಶಯವೇ ಎಲ್ಲರೂ ಸಮಾನವಾಗಿ ಜೀವಿಸಬೇಕು ಎಂಬುದಾಗಿದೆ ಎಂದು ಹೇಳಿದರು.
ಮೇಲು-ಕೀಳು ತ್ಯಜಿಸಿ ಬಾಳೋಣ
“ಮೂಲದಲ್ಲಿ ನಾವೆಲ್ಲರೂ ಒಂದೇ ಆಗಿದ್ದು, ಆನಂತರವೇ ಮನುಷ್ಯರು ಮೇಲು ಕೀಳುಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅಂತಹ ಭೇದಭಾವಗಳನ್ನೆಲ್ಲಾ ತ್ಯಜಿಸಿ, ಭ್ರಾತೃತ್ವದ ಭಾವನೆಯಿಂದ ಜೀವಿಸಬೇಕು,” ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು.
ವೇದಿಕೆಯ ಮೇಲೆ ವಾಲ್ಮೀಕಿ ಶ್ರೀ ಗೋಲಪಲ್ಲಿ, ಹನುಮೇಗೌಡ ಬೀರನಕಲ್, ಗ್ರಾಮದ ವಾಲ್ಮೀಕಿ ಸಮುದಾಯದ ಮುಖಂಡರು, ಗ್ರಾಮಸ್ಥರು ಮತ್ತು ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಗಳು, ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಶಾಸಕರೊಂದಿಗೆ ಹೆಜ್ಜೆಹಾಕಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.

