ಶಹಾಪುರದಲ್ಲಿ ಅಕ್ರಮ ಹತ್ತಿ ಖರೀದಿ ಕೇಂದ್ರಗಳ ಹಾವಳಿ: ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗೆ ಮನವಿ
ಜನ ಆಕ್ರೋಶ ಸುದ್ದಿಜಾಲ
ಯಾದಗಿರಿ: (ಅಕ್ಟೋಬರ್ 30):ಶಹಾಪುರ ತಾಲ್ಲೂಕಿನಾದ್ಯಂತ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಹತ್ತಿ ಖರೀದಿ ಕೇಂದ್ರಗಳು ತಲೆ ಎತ್ತಿದ್ದು, ಇವುಗಳಿಂದ ರೈತರ ಶೋಷಣೆಯಾಗುತ್ತಿದೆ ಎಂದು ಆರೋಪಿಸಿ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ(ರಿ) ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಶಹಾಪುರ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಲಾಗಿದೆ.
ಶಹಾಪುರದಿಂದ ಯಾದಗಿರಿ, ಕಲಬುರಗಿ ಹಾಗೂ ಸುರಪುರ ಮಾರ್ಗಮಧ್ಯೆ ಇಂತಹ ಅನೇಕ ಅನಧಿಕೃತ ಹತ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪರವಾನಗಿ ಪಡೆಯದೆ ಆರಂಭವಾಗಿರುವ ಈ ಕೇಂದ್ರಗಳಲ್ಲಿ ತೂಕದಲ್ಲಿ ಮೋಸ ಮಾಡುವುದು ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆ ನೀಡುವುದು ಸಾಮಾನ್ಯವಾಗಿದೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಈಗಾಗಲೇ ಸಾಲದಲ್ಲಿರುವ ರೈತರು ತಮ್ಮ ಅಲ್ಪಸ್ವಲ್ಪ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಶೋಷಣೆಗೊಳಗಾಗುತ್ತಿದ್ದಾರೆ ಎಂದು ಸಂಘವು ಮನವಿಯಲ್ಲಿ ತಿಳಿಸಿದೆ.
ಯಾವುದೇ ಭದ್ರತೆಯಿಲ್ಲದೆ ಇಂತಹ ಅಕ್ರಮ ಕೇಂದ್ರಗಳಿಗೆ ರೈತರು ಹತ್ತಿಯನ್ನು ಮಾರಾಟ ಮಾಡುತ್ತಿದ್ದು, ಖರೀದಿದಾರರು ಪರಾರಿಯಾದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಅಕ್ರಮ ಮಾರಾಟ ಮಾಡುವವರನ್ನು ಕೇಳುವವರು ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಕೇಂದ್ರಗಳಿಗೆ ತಕ್ಷಣ ಕಡಿವಾಣ ಹಾಕಿ, ಸ್ಥಳ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಇದೇ ವೇಳೆ, ರೈತರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಸರ್ಕಾರ ಕೂಡಲೇ ಹೊಸ ಹತ್ತಿ ಮಾರಾಟ ಕೇಂದ್ರವನ್ನು ಸ್ಥಾಪಿಸಬೇಕು ಮತ್ತು ಹತ್ತಿಗೆ ಕ್ವಿಂಟಲ್‌ಗೆ ೧೫,೦೦೦ ರೂ.ಗಳ ಬೆಂಬಲ ಬೆಲೆಯನ್ನು ನಿಗದಿಪಡಿಸಿ ರೈತರಿಗೆ ನೆರವಾಗಬೇಕು ಎಂದು ಸಂಘದ ಪದಾಧಿಕಾರಿಗಳು ವಿನಂತಿಸಿದರು. ಈ ಸಂದರ್ಭದಲ್ಲಿ ಪ್ರದೀಪ ಅಣಬಿ, ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಸುರೇಶ ಹಳಿಸಗರ ಸೇರಿದಂತೆ ಇನ್ನಿತರ ಸಂಘದ ಸದಸ್ಯರು ಉಪಸ್ಥಿತರಿದ್ದರು.

