ಕೋಟಿ ಅನುದಾನವಿದ್ದರೂ ಭಾಗೀರಥಿ ಹಳ್ಳ ರಸ್ತೆ ಕಳಪೆ: ಸಂಬಂಧಪಟ್ಟವರ ಗಮನಕ್ಕೆ ತರಲು ಇಮ್ತಿಯಾಜ ಹಿಪ್ಪರಗಿ ಆಗ್ರಹ
ಅಥಣಿ: (ನಮ್ಮ ವರದಿಗಾರರಿಂದ) ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಿರಂತರ ವಾಹನ ದಟ್ಟಣೆಯಿಂದಾಗಿ ಜನಸಾಮಾನ್ಯರು ಪ್ರತಿದಿನವೂ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದಕ್ಕೆ ತಕ್ಷಣವೇ ಪರಿಹಾರ ಒದಗಿಸುವಂತೆ ಜೆಡಿಎಸ್ ಕಾರ್ಯಕರ್ತ ಶ್ರೀ ಇಮ್ತಿಯಾಜ ಹಿಪ್ಪರಗಿ ಅವರು ಮಾಧ್ಯಮದ ಮೂಲಕ ತೀವ್ರ ಆಗ್ರಹ ಮಾಡಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿನ ಅಸ್ತವ್ಯಸ್ತತೆಯನ್ನು ಎತ್ತಿ ಹಿಡಿದ ಅವರು, ಅನಂತಪುರ ಸರ್ಕಲ್‌ನಿಂದ ಸಿದ್ದೇಶ್ವರ ದೇವಸ್ಥಾನದವರೆಗೆ, ಅದರಲ್ಲೂ ವಿಶೇಷವಾಗಿ ಹಳ್ಯಾಳ ಸರ್ಕಲ್ ಮತ್ತು ಅಂಬೇಡ್ಕರ್ ಸರ್ಕಲ್ಗಳಲ್ಲಿ ಜನದಟ್ಟಣೆ ಮಿತಿಮೀರಿದೆ. ದ್ವಿಚಕ್ರ ವಾಹನಗಳಿಂದ ಹಿಡಿದು ಸರಕು ಸಾಗಣೆ ವಾಹನಗಳವರೆಗೆ ಎಲ್ಲವೂ ಒಂದೇ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ.
ಬೈಪಾಸ್ ರಸ್ತೆ ನಿರ್ಲಕ್ಷ್ಯದ ಆರೋಪ:
ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗವಾಗಿ ಬೈಪಾಸ್ ರಸ್ತೆ ನಿರ್ಮಾಣದ ಅಗತ್ಯವನ್ನು ಇಮ್ತಿಯಾಜ ಹಿಪ್ಪರಗಿ ಅವರು ಪ್ರತಿಪಾದಿಸಿದರು. “ಟ್ರಾಫಿಕ್ ಪೊಲೀಸ್ ಇಲಾಖೆ ಸರ್ಕಲ್‌ಗಳಲ್ಲಿ ಸಿಗ್ನಲ್ ಲೈಟ್ ಅಥವಾ ಟ್ರಾಫಿಕ್ ನಿಯಂತ್ರಣಕ್ಕೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಅನಂತಪುರ ಸರ್ಕಲ್‌ನಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ನಿರ್ಮಾಣವಾಗಬೇಕಿದ್ದ ಬೈಪಾಸ್ ರಸ್ತೆ,” ಎಂದು ಅವರು ತಿಳಿಸಿದರು.
ಈ ಬೈಪಾಸ್ ರಸ್ತೆಯು ಭಾಗೀರಥಿ ಹಳ್ಳ ಕಾಮಗಾರಿಯ ವ್ಯಾಪ್ತಿಗೆ ಸೇರಿದ್ದು, ಮಾನ್ಯ ಶಾಸಕರು ಇದಕ್ಕಾಗಿ 10 ಕೋಟಿ ರೂಪಾಯಿಗಳಷ್ಟು ಅನುದಾನ ತಂದಿದ್ದರೂ ಸಹ, ಆ ಕಾಮಗಾರಿಯು ಈಗ ಕುಂಠಿತವಾಗಿದೆ. ಪ್ರಸ್ತುತ ಇರುವ ರಸ್ತೆಯು ಗುಂಡಿಗಳಿಂದ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ದುಸ್ತರವಾಗಿದೆ.
ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ:
“ಕುಂಠಿತವಾಗಿರುವ ರಸ್ತೆ ಕಾಮಗಾರಿಯನ್ನು ತಕ್ಷಣವೇ ದುರಸ್ತಿಪಡಿಸಿ, ಈ ಹೊಸ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಲ್ಲಿ, ಹಳ್ಯಾಳ ಮತ್ತು ಅಂಬೇಡ್ಕರ್ ಸರ್ಕಲ್‌ಗಳಲ್ಲಿನ ಜನದಟ್ಟಣೆ ಗಣನೀಯವಾಗಿ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ,” ಎಂದು ಅವರು ಹೇಳಿದರು.
ಈ ಕಾರ್ಯಕ್ಕೆ ಮಾನ್ಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರ, ಪುರಸಭೆ, ತಾಲೂಕಾ ಆಡಳಿತ ಸೇರಿದಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ, ಅಥಣಿ ನಗರದ ಅಭಿವೃದ್ಧಿಗೆ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕೆಂದು ಇಮ್ತಿಯಾಜ ಹಿಪ್ಪರಗಿ ಅವರು ಈ ಮೂಲಕ ಒತ್ತಾಯಿಸಿದ್ದಾರೆ.

