ಲಕ್ಷ್ಮೀಕಾಂತ ನಾಯಕ
ಶಹಾಪುರ: ರಸ್ತಾಪುರ ಗ್ರಾಮದಲ್ಲಿ ಒಂದೇ ಶೌಚಾಲಯ ಕಾಮಗಾರಿಗೆ ಎರಡು ಬಾರಿ ಬಿಲ್ ಪಾವತಿಸಿ ಸರ್ಕಾರಿ ಹಣ ದುರುಪಯೋಗ ಮಾಡಿರುವ ಆರೋಪದ ಬಗ್ಗೆ ನಾಲ್ಕು ವರ್ಷ ಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಿವಾಸಿ ಭಾಗಪ್ಪ ರಸ್ತಾಪುರ ಅವರು ಆರೋಪಿಸಿದ್ದಾರೆ.
ಈ ಕುರಿತು ಭಾಗಪ್ಪ ಅವರು 2021ರ ಸೆಪ್ಟೆಂಬರ್ 3ರಂದು ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ದೂರು ನೀಡಿದ್ದರು. ನಂತರ ಜಿಲ್ಲಾ ಪಂಚಾಯತ್‌ನಿಂದ ತನಿಖಾ ವರದಿ ಸಲ್ಲಿಸುವಂತೆ ಜ್ಞಾಪನಾ ಪತ್ರ ಬಂದಿತ್ತು. ಆದರೆ, ತಾಲ್ಲೂಕು ನೋಡಲ್ ಅಧಿಕಾರಿಗಳು ತನಿಖೆಯನ್ನು ನಿರ್ಲಕ್ಷಿಸಿ, ಕಾಟಾಚಾರಕ್ಕೆ ತನಿಖೆ ನಡೆಸಿ, “ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ” ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಹಿಂಬರಹ ನೀಡಿದ್ದಾರೆ ಎಂದು ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ:
- 2018-19ನೇ ಸಾಲಿನಲ್ಲಿ ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನರೇಗಾ ಯೋಜನೆಯಡಿ ₹1.20 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿತ್ತು.
- ಆದರೆ, ಅದೇ ಕಟ್ಟಡಕ್ಕೆ 15ನೇ ಹಣಕಾಸು ಯೋಜನೆಯಲ್ಲಿ ಅಂದಿನ ಪಿಡಿಓ ಸಂಗಪ್ಪ (ಮೃತ), ಈಗ ಸುರಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಇ ರಾಮಚಂದ್ರ, ಮತ್ತು ಒಬ್ಬ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸೇರಿ ಕಾಮಗಾರಿ ಬದಲಾವಣೆಯ ಹೆಸರಿನಲ್ಲಿ ಬಿಲ್ ಪಾವತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
- ಪ್ರೌಢ ಶಾಲೆಯ ಕಟ್ಟಡದ ಫೋಟೋ ಬಳಸಿ, ಒಂದು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ₹85,000 ಬಿಲ್ ಪಾವತಿಸಲಾಗಿದೆ. ಇದು ಸರ್ಕಾರದ ಹಣದ ದುರುಪಯೋಗ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭಾಗಪ್ಪ ರಸ್ತಾಪುರ ಅವರು, ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಜೆಇ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾದರೆ, ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

