ಹುರಸಗುಂಡಗಿಯಲ್ಲಿ ಸರ್ಕಾರದ ಅನುದಾನ ದುರ್ಬಳಕೆ ಆರೋಪ: 2 ನೀರಿನ ಪ್ಲಾಂಟ್ ದುರಸ್ತಿ ಹೆಸರಿನಲ್ಲಿ 3.3 ಲಕ್ಷ ರೂ. ಗೋಲ್ಮಾಲ್?
ಶಹಾಪುರ: ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಎರಡು ನೀರಿನ ಪ್ಲಾಂಟ್‌ಗಳ ದುರಸ್ತಿ ಕಾಮಗಾರಿ ಹೆಸರಿನಲ್ಲಿ 3.33 ಲಕ್ಷ ರೂಪಾಯಿಗಳ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ತಾಲೂಕಾ ಸಮಿತಿ ಅಧ್ಯಕ್ಷ ಪ್ರದೀಪ ಅಣಬಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ದೂರಿನ ಪ್ರಕಾರ, ಹುರಸಗುಂಡಗಿ ಗ್ರಾಮದ ನೀರಿನ ಪ್ಲಾಂಟ್ ದುರಸ್ತಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದರೆ, ಪಂಚಾಯತ್ ಅಧಿಕಾರಿಗಳು ಯಾವುದೇ ಕೆಲಸ ಮಾಡದೇ, ಕೇವಲ ಕಾಗದದಲ್ಲಿ “ಶ್ರೀಶೈಲ ಏಜೆನ್ಸಿ” ಹೆಸರಿನಲ್ಲಿ ಏಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮದಲ್ಲಿ ಎರಡು ನೀರಿನ ಪ್ಲಾಂಟ್‌ಗಳಿದ್ದು, ಎರಡರ ದುರಸ್ತಿ ಕಾಮಗಾರಿ ಮಾಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ಇನ್ನೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಂತಹ ಅಕ್ರಮ ಹಾಗೂ ಹಣ ದುರ್ಬಳಕೆ ಸಾರ್ವಜನಿಕ ಹಿತಕ್ಕೆ ವಿರುದ್ಧವಾಗಿದ್ದು, ಈ ಬಗ್ಗೆ ತಕ್ಷಣ ತನಿಖೆ ನಡೆಸಿ ಪಿಡಿಓ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಹಾಗೂ ದುರುಪಯೋಗಗೊಂಡ ಹಣವನ್ನು ಮರಳಿ ಸರ್ಕಾರಕ್ಕೆ ಸಂದಾಯ ಮಾಡಿಸಬೇಕು ಎಂದು ಪ್ರದೀಪ ಅಣಬಿ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ದೂರಿನ ಪ್ರತಿಯನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೂ ಕಳುಹಿಸಲಾಗಿದೆ.
ಈ ಸಂಬಂಧ ತಾಲೂಕು ಪಂಚಾಯತ್ ಅಧಿಕಾರಿಗಳು ತನಿಖೆ ಕೈಗೊಂಡ ಬಳಿಕವೇ ಸತ್ಯಾಂಶ ಹೊರಬೀಳಬೇಕಿದೆ.

