ಯಾದಗಿರಿ/ರಾಜ್ಯಾದ್ಯಂತ: ನೂರಾರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಂದೂ ತರಗತಿ ನಡೆಯದ ಸರ್ಕಾರದ ಭೀಕರ ತಾರತಮ್ಯವನ್ನು ಖಂಡಿಸಿ, ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಲು ಒತ್ತಾಯಿಸಿ ರಾಜ್ಯದಾದ್ಯಂತ ಸರ್ಕಾರಿ ಪದವಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಪದವಿ ಕಾಲೇಜುಗಳು ಈಗಾಗಲೇ ಎರಡು ಘಟಕ ಪರೀಕ್ಷೆಗಳನ್ನು ಮುಗಿಸಿ ಸೆಮಿಸ್ಟರ್ ಪರೀಕ್ಷೆಯ ತಯಾರಿಯಲ್ಲಿರುವಾಗ, ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರೇ ಇಲ್ಲದೆ ತರಗತಿಗಳು ಸ್ಥಗಿತಗೊಂಡಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ತರಗತಿ ನಡೆಸದೆ ಪರೀಕ್ಷೆ ಬೇಡ!
ಈ ಕುರಿತು ಎಐಡಿಎಸ್‌ಓ (AIDSO) ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ. ಕೆ. ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸರ್ಕಾರದ ಧೋರಣೆಯ ವಿರುದ್ಧ ಕಿಡಿಕಾರಿದ್ದಾರೆ.
“ಅತಿಥಿ ಉಪನ್ಯಾಸಕರಿಲ್ಲದೇ, ಒಂದೂ ತರಗತಿ ನಡೆಯದಿದ್ದರೂ ವಿಶ್ವವಿದ್ಯಾಲಯಗಳು (ವಿವಿಗಳು) ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿರುವುದು ಖಂಡನೀಯ. ಇದು ಸರ್ಕಾರಿ ವಿವಿಗಳು ಖಾಸಗಿ ಪದವಿ ಕಾಲೇಜುಗಳಿಗೆ ಮಾತ್ರವೇ ಇವೆಯೇ ಎಂಬ ಪ್ರಶ್ನೆ ಮೂಡಿಸುತ್ತದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಪ್ರಥಮ ದರ್ಜೆ ಮಹಿಳಾ ಕಾಲೇಜು ಸೇರಿದಂತೆ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿದ್ದಾರೆ.
ಹೋರಾಟ ಮುಂದುವರಿಕೆ ನಿರ್ಧಾರ
ತರಗತಿ ಬಹಿಷ್ಕಾರದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮುಂದಿನ ಹೋರಾಟದ ರೂಪುರೇಷೆಗಳನ್ನು ಸಹ ನಿರ್ಧರಿಸಿದ್ದಾರೆ. “ತರಗತಿ ನಡೆಸದೆ ಪರೀಕ್ಷೆ ಬೇಡ!” ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಸಂಘರ್ಷವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ಸರ್ಕಾರದ ತಾರತಮ್ಯದ ಧೋರಣೆ ಬದಲಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಶಿಲ್ಪಾ ಬಿ. ಕೆ. ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕೂಡಲೇ ಸರ್ಕಾರವು ವಿಷಯದ ಗಂಭೀರತೆಯನ್ನು ಅರಿತು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿ ಕಾಪಾಡಬೇಕು ಎಂದು ವಿದ್ಯಾರ್ಥಿ ಸಮುದಾಯ ಆಗ್ರಹಿಸಿದೆ.

