ಜನ ಆಕ್ರೋಶ ಸುದ್ದಿಜಾಲ
ಶಹಾಪುರ(ಯಾದಗಿರಿ):ನಾರಾಯಣಪುರದ ಬಸವಸಾಗರ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ನೀರು ಹರಿಸುವ ಕುರಿತು ನಿರ್ಧರಿಸಲು ನವೆಂಬರ್ 4 ರಂದು ನಡೆಯಲಿರುವ ಐಸಿಸಿ (Irrigation Consultative Committee) ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ರೈತರ ಧ್ವನಿಯಾಗಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಯುವ ಘಟಕವು ಒತ್ತಾಯಿಸಿದೆ.
ಮುಂಗಾರು ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿರುವ ಹಿನ್ನೆಲೆಯಲ್ಲಿ, ಹಿಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ವೆಂಕಟೇಶ ನಾಯಕ ಆಲ್ದಾಳ ಅವರು ಮನವಿ ಮಾಡಿದ್ದಾರೆ. ಹಿಂಗಾರಿನಲ್ಲಿ ಶೇಂಗಾ, ಜೋಳ, ಕಡಲಿ ಮುಂತಾದ ಬೆಳೆಗಳನ್ನು ಬೆಳೆಯಲು ಇದು ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಿಯಮ ಸಡಿಲಿಕೆಗೆ ಬೇಡಿಕೆ:
ಕಳೆದ ವರ್ಷ ಜಾರಿಯಲ್ಲಿದ್ದ ’14 ದಿನ ಚಾಲು, 10 ದಿನ ಬಂದ್’ ನೀರು ಬಿಡುವ ಪ್ರಕ್ರಿಯೆಯನ್ನು ಸಡಿಲಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಹಳೆಯ ನಿಯಮದಿಂದಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚಾದಾಗ ಕಾಲುವೆಯ ಕೊನೆಯ ಭಾಗದ ಗದ್ದೆಗಳಿಗೆ ನೀರು ತಲುಪಲು ಸಾಧ್ಯವಾಗಿರಲಿಲ್ಲ. ಇದರಿಂದ ವಡಗೇರಾ ಭಾಗದ ಅನೇಕ ರೈತರು ಸಂಕಷ್ಟ ಎದುರಿಸಿದ್ದರು.
ಆದ್ದರಿಂದ, ಈ ಬಾರಿ ’14 ದಿನ ಚಾಲು, 8 ದಿನ ಬಂದ್’ ಪ್ರಕ್ರಿಯೆ ಜಾರಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ಶಾಸಕರಿಗೆ ಮನವಿ:
ಐಸಿಸಿ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ, ಯಾದಗಿರಿ ಶಾಸಕ ಶ್ರೀ ಚನ್ನಾರೆಡ್ಡಿ ತುನ್ನೂರು, ಗುರುಮಿಠಕಲ್ ಶಾಸಕ ಶ್ರೀ ಶರಣುಗೌಡ ಕಂದಕೂರು, ಸುರಪುರ ಶಾಸಕ ಶ್ರೀ ರಾಜಾ ವೇಣುಗೋಪಾಲ ನಾಯಕ ಮತ್ತು ಜೇವರ್ಗಿ ಶಾಸಕ ಶ್ರೀ ಅಜಯ್ ಸಿಂಗ್ ರವರು ತಪ್ಪದೇ ಹಾಜರಾಗಿ, ಐಸಿಸಿ ಅಧ್ಯಕ್ಷರೂ ಆದ ಸಚಿವ ಆರ್.ಬಿ. ತಿಮ್ಮಾಪುರಿ ಅವರ ಮೇಲೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

