ಜನ ಆಕ್ರೋಶ ವಿಶೇಷ ವರದಿ
ಕಾವೇರಿ ಪ್ರಾಧಿಕಾರ ಪರಿಶೀಲನೆಯಲ್ಲಿ ಯೋಜನೆ; ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಬೆಂಗಳೂರು: ರಾಜ್ಯದ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಕೊನೆಗೂ ಮಹತ್ವದ ಜಯ ದೊರೆತಿದೆ. ಕಳೆದ 7 ವರ್ಷಗಳಿಂದ ಯೋಜನೆಯನ್ನು ತಡೆ ಹಿಡಿದಿದ್ದ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಯೋಜನೆ ಕಾರ್ಯಗತಗೊಳಿಸಲು ಹಸಿರು ನಿಶಾನೆ ದೊರೆತಿದ್ದು, ಇದು ಕನ್ನಡಿಗರ ಮತ್ತು ಸರ್ಕಾರದ ಹೋರಾಟಕ್ಕೆ ದೊರೆತ ಐತಿಹಾಸಿಕ ಗೆಲುವು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸರ್ಕಾರದ ಇತ್ತೀಚಿನ ಸಚಿವ ಸಂಪುಟ ಸಭೆಯ ನಿರ್ಧಾರಗಳನ್ನು ವಿವರಿಸಿದ ಸಚಿವರು, ಮೇಕೆದಾಟು ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿರುವ ಕಾರಣ, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹೋರಾಟದಲ್ಲಿ ಬೆಂಬಲವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಅಭಿನಂದಿಸಿದೆ.
ಮೂಲಸೌಕರ್ಯಕ್ಕೆ ಕೋಟಿ ಕೋಟಿ ಅನುಮೋದನೆ
ಸರ್ಕಾರವು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ:
- ರಾಯಚೂರು ಏತ ನೀರಾವರಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮುದ್ಲಾಪುರ ಏತ ನೀರಾವರಿ ಯೋಜನೆಗೆ ರೂ.21.00 ಕೋಟಿ ಹಾಗೂ ದದ್ದಲ್ (ಗೌರಮ್ಮ ಬಂಡಿ) ಏತ ನೀರಾವರಿ ಯೋಜನೆಗೆ ರೂ.34.00 ಕೋಟಿಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಗ್ರೇಟರ್ ಬೆಂಗಳೂರು ಸ್ವಚ್ಛತೆ: ಬೆಂಗಳೂರಿನ ಐದು ನಗರ ಪಾಲಿಕೆಗಳ ಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ ಯಾಂತ್ರಿಕ ಕಸಗುಡಿಸುವಿಕೆ ಯಂತ್ರಗಳನ್ನು (Mechanical Sweeping Machine) 7 ವರ್ಷಗಳ ಅವಧಿಗೆ ಪಡೆಯಲು ರೂ.613.25 ಕೋಟಿಗಳ (ಜಿಎಸ್‌ಟಿ ಸೇರಿ) ಬೃಹತ್ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಡಳಿತ ಮತ್ತು ನೀತಿಗಳಿಗೆ ಮಹತ್ವದ ತೀರ್ಮಾನ - ಬೆಳಗಾವಿ ಅಧಿವೇಶನ: ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ.
- ಗ್ರೇಟರ್ ಬೆಂಗಳೂರು ತಿದ್ದುಪಡಿ: ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ, 2025 ಕ್ಕೆ ಅನುಮೋದನೆ ನೀಡಲಾಗಿದ್ದು, ಇದನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಆಡಳಿತ ಮಂಡಳಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ), ಮತ್ತು ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ (ಆರ್ಥಿಕ ಇಲಾಖೆ) ಅವರನ್ನು ಸೇರಿಸಲಾಗುತ್ತಿದೆ.
- ತಂತ್ರಜ್ಞಾನ ನೀತಿಗಳು: ರಾಜ್ಯದಲ್ಲಿ ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಬಲ ತುಂಬುವ ಉದ್ದೇಶದಿಂದ “ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030” ಮತ್ತು “ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030” ಗಳಿಗೆ ಅನುಮೋದನೆ ನೀಡಲಾಗಿದೆ.
- 5 ಲಕ್ಷ ಉದ್ಯೋಗದ ಗುರಿ: ರಕ್ಷಣಾ ತಂತ್ರಜ್ಞಾನ ಮತ್ತು ಕೈಗಾರಿಕೆ 5.0 ರಲ್ಲಿ ಉತ್ಕೃಷ್ಟತಾ ಕೇಂದ್ರ (CoE) ಸ್ಥಾಪನೆಗೆ ಐಐಟಿ-ಧಾರವಾಡ ಜೊತೆ ಪಾಲುದಾರಿಕೆ ಮಾಡಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಂದ ರಾಜ್ಯಾದ್ಯಂತ ಐದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.
- ಆರೋಗ್ಯ ಕ್ಷೇತ್ರ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ರೂ.27.92 ಕೋಟಿ ಹಾಗೂ ಕಟ್ಟಡದ ಸರ್ವೀಸಸ್ ಕಾಮಗಾರಿಗೆ ರೂ.21.00 ಕೋಟಿ ಅನುಮೋದಿಸಲಾಗಿದೆ.
- ನೂತನ ನಗರಸಭೆ: ಬೀದರ್ ಜಿಲ್ಲೆಯ ಹಾಲಿ ಭಾಲ್ಕಿ ಪುರಸಭೆಯನ್ನು ಭಾಲ್ಕಿ ನಗರಸಭೆ ಯನ್ನಾಗಿ ಉದ್ಘೋಷಿಸಲು ಮತ್ತು ಕಮಲನಗರ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ರಚಿಸಲು ತೀರ್ಮಾನಿಸಲಾಗಿದೆ.

