ಬೆಳಗಾವಿ: ಅಥಣಿ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹೃದಯ ಭಾಗದಲ್ಲಿರುವ ಬಸ್ಟ್ಯಾಂಡ್ ರೋಡ್ ಕೆಎಸ್ಆರ್ಟಿಸಿ ಕಾಂಪ್ಲೆಕ್ಸ್ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಬೃಹತ್ ತೆಗ್ಗು ಗುಂಡಿಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಿದಷ್ಟೇ ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ.
ತೆಗ್ಗು ಗುಂಡಿಗಳಲ್ಲಿ ಮುಳುಗಿದ ಬಸ್ಟ್ಯಾಂಡ್ ರಸ್ತೆ
ಅಥಣಿಯ ಬಸ್ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಯು ಸಂಪೂರ್ಣವಾಗಿ ಹೊಂಡಮಯವಾಗಿದೆ. ಈ ಗುಂಡಿಗಳು ಬೈಕ್ ಸವಾರರಿಗೆ ಮತ್ತು ಇತರ ವಾಹನಗಳಿಗೆ ಗೋಚರಿಸದ ‘ಕಾಣದ ತೆಗ್ಗುಂಡಿಗಳಂತೆ’ ಮಾರ್ಪಟ್ಟಿವೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು, ಅವುಗಳ ಆಳ ತಿಳಿಯದೆ ಅನೇಕ ಬೈಕ್ ಸವಾರರು ಪ್ರತಿದಿನ ಬೀಳುವ ಸಾಧ್ಯತೆಗಳಿವೆ. ಇಲ್ಲಿ ಈಗಾಗಲೇ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು, ದೊಡ್ಡ ಅನಾಹುತ ಸಂಭವಿಸುವ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ.
ಅಪಘಾತ ಸಂಭವಿಸಿದರೆ ಹೊಣೆ ಯಾರು?
ರಸ್ತೆಗಳ ನಿರ್ವಹಣೆ ಸ್ಥಳೀಯ ಸಂಸ್ಥೆಗಳು ಮತ್ತು ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯಾಗಿದ್ದರೂ, ರಸ್ತೆಯ ಈ ದುಃಸ್ಥಿತಿ ನಿರ್ಲಕ್ಷ್ಯದ ಪರಮಾವಧಿಯನ್ನು ತೋರಿಸುತ್ತದೆ. ಸಾರ್ವಜನಿಕರು, “ಒಂದು ವೇಳೆ ಈ ರಸ್ತೆಯಲ್ಲಿ ಯಾರಿಗಾದರೂ ಗಂಭೀರ ಅಪಘಾತ ಸಂಭವಿಸಿದರೆ, ಇದಕ್ಕೆ ಯಾರು ಹೊಣೆಗಾರರು? ಶಾಸಕರು, ಜಿಲ್ಲಾಧಿಕಾರಿಗಳು, ಅಥವಾ ತಾಲೂಕಾ ಆಡಳಿತವೇ? ಹದಗೆಟ್ಟ ರಸ್ತೆಯಿಂದಾಗಿ ನಡೆಯುವ ಪ್ರತಿ ಅನಾಹುತಕ್ಕೂ ಸರ್ಕಾರವೇ ನೇರ ಹೊಣೆ” ಎಂದು ಪ್ರಶ್ನಿಸಿದ್ದಾರೆ.
ಸಮಾಜ ಸೇವಕರಿಂದ ಆಡಳಿತಕ್ಕೆ ಎಚ್ಚರಿಕೆ
ಸಮಾಜ ಸೇವಕ ಚಂದ್ರಕಾಂತ್ ಹುಕ್ಕೇರಿ ಅವರು ಚಿಕ್ಕೋಡಿ ಮಾಧ್ಯಮ ಮತ್ತು ಪತ್ರಿಕೆಗಳೊಂದಿಗೆ ಮಾತನಾಡಿ, ರಸ್ತೆಯ ದುಃಸ್ಥಿತಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಬ್ಯುಸಿಯಾಗಿದ್ದರೂ, ಜನ ಸಂಚರಿಸುವ ರಸ್ತೆಗಳು ಹದಗೆಟ್ಟು ಹೋಗಿವೆ. ಅಧಿಕಾರಿಗಳು ಕಣ್ಣು ಇದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ. ಮಾಧ್ಯಮ ವರದಿಗಳಿಗಾದರೂ ಎಚ್ಚೆತ್ತುಕೊಂಡು, ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕರು ಈ ರಸ್ತೆ ಯಾವಾಗ ನಿರ್ಮಾಣವಾಗುತ್ತದೆ ಎಂಬುದು ನಿಗೂಢ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು, ತಾಲೂಕಾಡಳಿತ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಾನ್ಯ ಶಾಸಕರು ಈ ರಸ್ತೆಯ ದುರಸ್ತಿಗೆ ತುರ್ತು ಗಮನಹರಿಸಿ, ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದರೆ, “ಹೇಳೋರಿಲ್ಲ, ಕೇಳೋರಿಲ್ಲ” ಎಂಬ ಸ್ಥಿತಿ ಮುಂದುವರಿದು, ರಸ್ತೆ ಯಥಾಸ್ಥಿತಿಯಲ್ಲಿಯೇ ಉಳಿಯಲಿದೆ.

