ಲಕ್ಷ್ಮೀಕಾಂತ ನಾಯಕ
ಯಾದಗಿರಿ/ಶಹಪುರ: ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ಕಾರ್ಮಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಶಹಪುರದ ಎರಡು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸುವಂತೆ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಅಣಬಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕಾರ್ಮಿಕರ ಈ ಬೇಡಿಕೆಗೆ ಕಾರ್ಮಿಕ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮನವಿಯನ್ನು ಪರಿಶೀಲಿಸುವಂತೆ ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತರು ಯಾದಗಿರಿ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ಬೆಳವಣಿಗೆಯ ಬಗ್ಗೆ “ಜನ ಆಕ್ರೋಶ” ಪತ್ರಿಕೆಗೆ ಮಾಹಿತಿ ನೀಡಿದ ಪ್ರದೀಪ್ ಅಣಬಿ, “ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಚಿಕಿತ್ಸೆ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಜಿಲ್ಲೆಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಕೇವಲ ಎರಡು ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕಿತ್ತು. ಜಿಲ್ಲೆಯಲ್ಲಿ ಒಟ್ಟು ಹನ್ನೊಂದು ಆಸ್ಪತ್ರೆಗಳಿದ್ದರೂ, ಅದರಲ್ಲಿ ಒಂಬತ್ತು ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಾಗಿದ್ದವು. ಇದರಿಂದಾಗಿ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಅನಗತ್ಯವಾಗಿ ದೂರದ ಊರುಗಳಿಗೆ ಪ್ರಯಾಣಿಸಿ ತೊಂದರೆ ಅನುಭವಿಸುತ್ತಿದ್ದರು,” ಎಂದು ತಿಳಿಸಿದರು.
ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ, ಸಂಘವು ಶಹಪುರ ನಗರದಲ್ಲಿರುವ ದಿ. ಶ್ರೀ ಅಚ್ಚಪ್ಪಗೌಡ ಸುಬೇದಾರ್ ಸಗರ ಸ್ಮಾರಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ಪಂದನ ಹಾಸ್ಪಿಟಲ್‌ಗಳಲ್ಲಿ ಕಾರ್ಮಿಕರಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿತ್ತು. ಸಂಘದ ಈ ನಿರಂತರ ಪ್ರಯತ್ನಕ್ಕೆ ಇದೀಗ ಯಶಸ್ಸು ಸಿಕ್ಕಿದೆ.
ಶಹಪುರದ ಹೃದಯಭಾಗದಲ್ಲಿರುವ ಈ ಎರಡು ಖಾಸಗಿ ಆಸ್ಪತ್ರೆಗಳು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಇಲ್ಲಿ ಚಿಕಿತ್ಸೆಗೆ ಅವಕಾಶ ನೀಡಿದರೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಮತ್ತು ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಹಿತಾಸಕ್ತಿಗಾಗಿ ನಡೆಸಿದ ಈ ಪ್ರಯತ್ನಕ್ಕೆ ಕಾರ್ಮಿಕ ಇಲಾಖೆ ಸ್ಪಂದಿಸಿರುವುದು ಶ್ಲಾಘನೀಯ ಎಂದು ಪ್ರದೀಪ್ ಅಣಬಿ ಹೇಳಿದರು.

