ಸಕ್ರಿಯ ಕ್ಷಯರೋಗ ಮತ್ತು ಕುಷ್ಠ ರೋಗ ಪತ್ತೆ ಆಂದೋಲನ: ಮನೆ ಮನೆ ಸರ್ವೆ ಆರಂಭ ಪಟ್ಟಣದಲ್ಲಿ ನವೆಂಬರ್ 19ರವರೆಗೆ ಅಭಿಯಾನ; 2025ರ ವೇಳೆಗೆ ಕ್ಷಯ ನಿರ್ಮೂಲನೆ ಗುರಿ
ದೇವದುರ್ಗ:ಸಕ್ರಿಯ ಕ್ಷಯರೋಗ ಮತ್ತು ಕುಷ್ಠ ರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ದಿನಾಂಕ 03.11.2025ರಂದು ಪಟ್ಟಣದ ಯಲ್ಲಾಲಿಂಗ ಕಾಲನಿಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಬನದೇಶ್ವರ ಗಬ್ಬೂರು ಅವರು ಮಾತನಾಡಿ, ದಿನಾಂಕ 03/11/2025ರಿಂದ 19/11/2025ರವರೆಗೆ ಸಕ್ರಿಯ ಕ್ಷಯರೋಗ ಮತ್ತು ಕುಷ್ಠ ರೋಗ ಪತ್ತೆಹಚ್ಚುವ ಅಭಿಯಾನದ ಮನೆ ಮನೆ ಸರ್ವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅವರು ಕ್ಷಯರೋಗದ ಕುರಿತು ಮಾಹಿತಿ ನೀಡಿ, ಕ್ಷಯರೋಗವು ಮೈಕೋಬ್ಯಾಕ್ತಿರಿಯಂ ಟೂಬರಕ್ಯೂಲೆ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಇದು ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕ್ಷಯರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ ತುಂತುರು ಹನಿಗಳು ಗಾಳಿಯ ಮುಖಾಂತರ ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಆತನು ಕೂಡ ಕ್ಷಯರೋಗಕ್ಕೆ ತುತ್ತಾಗುತ್ತಾನೆ. ಕ್ಷಯರೋಗಿಯು ಚಿಕಿತ್ಸೆ ಪಡೆಯದೇ ಇದ್ದಲ್ಲಿ ವರ್ಷಕ್ಕೆ 10-15 ಜನರಿಗೆ ಹರಡಿಸುತ್ತಾನೆ ಎಂದು ಹೇಳಿದರು.
ಈ ತರಹದ ಲಕ್ಷಣಗಳು ಕಾಣಿಸಿದಲ್ಲಿ ತಡಮಾಡದೆ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆಯ ಮುಖಾಂತರ ರೋಗ ದೃಢಪಟ್ಟಲ್ಲಿ ಉಚಿತವಾಗಿ ಲಭ್ಯವಿರುವ ಚಿಕಿತ್ಸೆಯನ್ನು ಪಡೆಯಬೇಕು. ಜೊತೆಗೆ ನಿಕ್ಷಯ ಪೋಷಣೆ ಯೋಜನೆ ಅಡಿಯಲ್ಲಿ ರೋಗಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1000 ರೂಪಾಯಿಗಳನ್ನು ಪೌಷ್ಟಿಕ ಆಹಾರ ಸೇವನೆಗೆ ಜಮಾ ಮಾಡಲಾಗುತ್ತದೆ. 2025ರ ವೇಳೆಗೆ ಕ್ಷಯವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಕಾರಣ ನಾವೆಲ್ಲರೂ ಸೇರಿ ಕ್ಷಯವನ್ನು ಕೊನೆಗೊಳಿಸೋಣ ಎಂದು ಅವರು ಸಂದೇಶ ನೀಡಿದರು.
ಇದೇ ವೇಳೆ ಕುಷ್ಠ ರೋಗದ ಬಗ್ಗೆಯೂ ಮಾಹಿತಿ ನೀಡಿದ ಡಾ. ಬನದೇಶ್ವರ ಗಬ್ಬೂರು, ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ, ತಾಮ್ರವರ್ಣದ ಅಥವಾ ಕೆಂಪು ಮಿಶ್ರಿತ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಕಂಡು ಬಂದಲ್ಲಿ ಇದು ಕುಷ್ಠ ರೋಗದ ಲಕ್ಷಣವಾಗಿರುತ್ತದೆ. ಕೈ ಕಾಲುಗಳಲ್ಲಿ ಜೋಮು ಹಿಡಿಯುವಿಕೆ, ಮುಖ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತೆ ಹೊಳಪು ಮತ್ತು ಗಂಟುಗಳು, ಕಣ್ಣು ರೆಪ್ಪೆ ಮುಚ್ಚಲು ಸಾಮರ್ಥ್ಯವಿಲ್ಲದಿರುವುದು, ಬಿಸಿ ಮತ್ತು ತಣ್ಣನೆ ವಸ್ತುಗಳನ್ನು ಮುಟ್ಟಿದಾಗ ಸ್ಪರ್ಶದ ಅರಿವಿಲ್ಲದಿರುವುದು, ಅಂಗೈ ಮತ್ತು ಪಾದಗಳಲ್ಲಿ ದುರ್ಬಲತೆ ಇಂಥ ಸಮಸ್ಯೆಗಳಿದ್ದಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರಿಂದ ತಪಾಸಣೆಗೆ ಒಳಪಡಬೇಕು ಮತ್ತು ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಕುಷ್ಠರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಆರಂಭಿಕ ಹಂತದಲ್ಲಿಯೇ ಕುಷ್ಠ ರೋಗವನ್ನು ಪತ್ತೆ ಹಚ್ಚುವ ಮೂಲಕ ಅಂಗವಿಕಲತೆಯನ್ನು ತಪ್ಪಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಶಿವಪ್ಪ, ಚನ್ನಬಸಯ್ಯ, ವೆಂಕಟೇಶ್, ಗೀತಮ್ಮ್, ಸೋಮಪ್ಪ, ರವಿ ಶುಕ್ಲಾ, ಚಂದ್ರಮಪ್ಪ, ರಾಜೇಶ್ವರಿ, ಶೃತಿ, ರೇಣುಕಾ, ಹಿರಿಯರು, ಯುವಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.



