ಯಾದಗಿರಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ನಗರದ ಶ್ರೀ ವಿದ್ಯಾ ಮಂಗಲ ಕಾರ್ಯಾಲಯ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ನಾಯಕರು, ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಂಶಪಾರಂಪರ್ಯ ರಾಜಕಾರಣವನ್ನು ಅಂತ್ಯಗೊಳಿಸುವ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪರ್ಯಾಯ ರಾಜಕಾರಣವನ್ನು ರೂಪಿಸುವ ಬಗ್ಗೆ ತಮ್ಮ ದೃಢ ಸಂಕಲ್ಪ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಾದಗಿರಿ ಜಿಲ್ಲಾಧ್ಯಕ್ಷ ಜಗನ್ನಾಥ್ ಎಸ್. ಚಿಂತನಹಳ್ಳಿ ಅವರು, “12ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದಂತೆ, ಈಗ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಹುಟ್ಟುಹಾಕುತ್ತಿರುವುದು ನಿಜಕ್ಕೂ ವಿಶೇಷ,” ಎಂದು ತಿಳಿಸಿದರು.
ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಮಾತನಾಡಿ, “ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ರಮಾನಂದ ತೀರ್ಥರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅಮೂಲ್ಯ. ಆದರೆ, ಇಂದಿಗೂ ಈ ಭಾಗದಲ್ಲಿ ವಂಶಪಾರಂಪರ್ಯ ಮತ್ತು ಕುಟುಂಬ ರಾಜಕಾರಣದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ, ಈ ರೀತಿಯ ರಾಜಕಾರಣಕ್ಕೆ ಮುಕ್ತಿ ನೀಡಲಿದ್ದಾರೆ,” ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್. ಮಾತನಾಡಿ, “ಈ ಭಾಗದ ಜನರು ವಿಮೋಚನಾ ದಿನವನ್ನು ಕೇವಲ ಉತ್ಸವವಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ. ರಾಜಕಾರಣಿಗಳು ಸಾವಿರಾರು ಎಕರೆ ಜಮೀನು ಹೊಂದಿದ್ದರೂ, ಸಾಮಾನ್ಯ ಜನರು ಕಡುಬಡತನದಲ್ಲಿ ನರಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬರುವ ಸಾವಿರಾರು ಕೋಟಿ ಅನುದಾನಗಳಲ್ಲಿ ಅರ್ಧದಷ್ಟು ಕೂಡ ಖರ್ಚಾಗುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ದೀಪ ಮನ್ನೂರು ಅವರು ಮಾತನಾಡಿ, “ಯಾದಗಿರಿ ಜಿಲ್ಲಾದ್ಯಂತ ಸಾರ್ವಜನಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರಿ ಸೇವೆಗಳು ಸರಿಯಾಗಿ ಲಭ್ಯವಿಲ್ಲ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲಿದೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಧ್ಯಕ್ಷ ರಘು ಜಾಣಗೆರೆ, ರಾಜ್ಯ ಉಪಾಧ್ಯಕ್ಷ ಸೋಮಸುಂದರ್ ಕೆ.ಎಸ್., ಮತ್ತು ವಿವಿಧ ಜಿಲ್ಲೆಗಳ ಅಧ್ಯಕ್ಷರು ಸೇರಿದಂತೆ ಹಲವು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

