ಕೊಪ್ಪಳ ನಗರದಲ್ಲಿ ಶಿಸ್ತು ಬದ್ಧ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮನವಿ
ಕೊಪ್ಪಳ : ನಗರದಲ್ಲಿ ಶಿಸ್ತು ಬದ್ಧ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ವೆಂಕಟೇಶ್ ನಾಯಕ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಕೊಪ್ಪಳ ನಗರದಲ್ಲಿ ಅನೇಕ ಕಡೆ ರಸ್ತೆ ಸಂಚಾರ ನಿಯಮಗಳನ್ನು ನಿರ್ಲಕ್ಷಿಸಲಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಸುಗಮ ಸಂಚಾರಕ್ಕೆ ಅನುಕೂಲಕರ ರೀತಿಯಲ್ಲಿ ವ್ಯವಸ್ಥಿತವಾಗಿ ಕ್ರಮಕೈಗೊಳ್ಳಬೇಕು.
ನಗರದ ಎಲ್ಲಾ ವೃತ್ತಗಳಲ್ಲೂ ಮತ್ತು ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಸಿ ದಿನದ 24 ತಾಸೂ ಚಾಲನೆಯಲ್ಲಿರುವಂತೆ ನಿರ್ವಹಣೆ ಮಾಡಲು ಸಂಬಂಧ ಪಟ್ಟ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು.
ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ನಗರದ ರಸ್ತೆಗಳ ಎರಡೂ ಬದಿಗಳಲ್ಲೂ ಪಾದಚಾರಿ ಮಾರ್ಗಗಳ ಜಾಗಗಳನ್ನು ಅತಿಕ್ರಮಿಸಿಕೊಂಡು ಗೂಡಂಗಡಿಗಳನ್ನು ನಡೆಸುತ್ತಿದ್ದು. ಇದರಿಂದ ಸಂಚರಿಸುವ ವಾಹನಗಳಿಗೆ ವಿಶೇಷವಾಗಿ ಪಾದಚಾರಿಗಳಿಗೆ ತುಂಬಾ ತೊಂದರೆಗಳು ಉಂಟಾಗುತ್ತಿವೆ. ತಕ್ಷಣ ಗೂಡಂಗಡಿಗಳನ್ನು ತೆರವುಗೊಳಿಸಿ ಮೂಲಭೂತ ಹಕ್ಕು ಹೊಂದಿರುವ ನಾಗರಿಕರಿಗೆ ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು.
ನಗರದ ಎಲ್ಲಾ ರಸ್ತೆಗಳ ಎರಡೂ ಬದಿಗಳ ರಸ್ತೆಗೂ ಪಾದಚಾರಿ ಮಾರ್ಗಕ್ಕೂ ಬಹಳಷ್ಟು ವ್ಯತ್ಯಾಸ (ಪಾದಚಾರಿ ಮಾರ್ಗ ಎತ್ತರದಲ್ಲಿದ್ದರೆ ರಸ್ತೆ ಕೆಳಗಿರುತ್ತದೆ. ಕೆಲ ಕಡೆ ಪಾದಾಚಾರಿ ಮಾರ್ಗ ಕೆಳಗಿದ್ದರೆ ರಸ್ತೆ ಮೇಲೆ ಇರುತ್ತದೆ) ರಸ್ತೆ ಮತ್ತು ಪಾದಾಚಾರಿ ಮಾರ್ಗ ಮೇಲೆ ಕೆಳಗೆ ಇರುವುದರಿಂದ ವಾಹನಗಳನ್ನು ನಿಲ್ಲಿಸಲು ಸಮಸ್ಯೆಯಾಗಿ ರಸ್ತೆಗೆ ಬರುತ್ತವೆ.ರಸ್ತೆ ಮತ್ತು ಪಾದಾಚಾರಿ ಮಾರ್ಗಗಳನ್ನು ಸಮತಟ್ಟಾಗಿ ಮಾಡುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎಲ್ಐಸಿ ಕಛೇರಿ ಹತ್ತಿರ ಮತ್ತು ಎಂ.ಹೆಚ್.ಪಿ.ಎಸ್. ಶಾಲೆಗೆ ಹೋಗುವ ಮಕ್ಕಳಿಗೆ ವಾಹನ ದಟ್ಟಣೆಯಿಂದ ತೊಂದರೆಯಾಗುತ್ತಿದ್ದು. ಅಪಘಾತಗಳಾಗುವ ಸಂಭವ ಹೆಚ್ಚಿರುವುದರಿಂದ ಬೆಳಿಗ್ಗೆ 9:00 ಗಂಟೆಯಿಂದ 10 ಗಂಟೆಯವರೆಗೆ.ಸಂಜೆ 4 ರಿಂದ 5 ಗಂಟೆಯವರೆಗೆ ಮಕ್ಕಳ ಹಿತ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಬೇಕು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ನಿಲ್ಲುವ ಖಾಸಗಿ ಬಸ್ಸುಗಳನ್ನು ತಕ್ಷಣ ಆ ಸ್ಥಳಗಳಲ್ಲಿ ನಿಲ್ಲಿಸುವದನ್ನು ನಿಷೇಧಿಸಿ. ಖಾಸಗಿ ಬಸ್ಸುಗಳಿಗೆ ಬೇರೆ ಕಡೆ ವ್ಯವಸ್ಥೆ ಕಲ್ಪಿಸಬೇಕು.
ನಗರದ ವೃತ್ತಗಳಲ್ಲಿ.ರಸ್ತೆಗಳ ತಿರುವುಗಳಲ್ಲಿ ತ್ರಿಚಕ್ರ.ನಾಲ್ಕು ಚಕ್ರ.ಭಾರಿ ವಾಹನಗಳನ್ನು ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು.
ನಗರದಲ್ಲಿ ಗುರುವಾರ ಮತ್ತು ಸೋಮವಾರ ಸಂತೆಯ ದಿನಗಳಾಗಿದ್ದು. ಸಂತೆ ದಿನಗಳಂದು ನಗರದ ಮಾರುಕಟ್ಟೆಯ ರಸ್ತೆಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಾಲ್ಕು ಗಾಲಿಯ ಹಾಗೂ ಭಾರಿ ವಾಹನಗಳು ನಿಷೇಧಿಸಬೇಕು.
ನಗರದ ಈದ್ಗಾ ದಿಂದ ಹಳೆಯ ಜಿಲ್ಲಾ ಆಸ್ಪತ್ರೆ ಮೂಲಕ ಟಿಪ್ಪು ಸುಲ್ತಾನ್ ವೃತ್ತದ ಕಡೆಗೆ ಹೋಗುವ ರಸ್ತೆ ಸೇರಿದಂತೆ ವಿವಿಧೆಡೆ ಜನದಟ್ಟಣೆ ಇರುವ ರಸ್ತೆಗಳನ್ನು ಗುರ್ತಿಸಿ ವಾಹನಗಳನ್ನು ಆಯಾ ದಿನಗಳಲ್ಲಿ ಒಂದು ಬದಿಗೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು.
ನಗರದ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಮಾಲಿಕರು ತಮ್ಮ ಅಂಗಡಿಯ ಸಾಮಾನುಗಳನ್ನು ಇಟ್ಟು ವ್ಯಾಪಾರ ಮಾಡುವುದನ್ನು ನಿಷೇಧಿಸಿ.ಆಯಾ ಅಂಗಡಿಗಳ ಮಾಲಕರಿಗೆ ದಂಡ ವಿಧಿಸಬೇಕು.
ನಗರದ ಬಹುತೇಕ ಕಡೆ ಹೊಸದಾಗಿ ಬಂದವರು ಅಧಿಕೃತ ಆಟೋರಿಕ್ಷಾ ನಿಲ್ದಾಣಗಳನ್ನು ದಾಟಿ ಪೈಪೋಟಿಯಿಂದ ಬೇರೆ ಕಡೆ ಆಟೋಗಳನ್ನು ನಿಲ್ಲಿಸಿ ನಿಯಮ ಉಲ್ಲಂಘಿಸುವವರ ವಿರುದ್ದ ಮತ್ತು ಮನಸ್ಸು ಇಚ್ಛೆ ಚಲಾಯಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಹೊಸದಾಗಿ ಬಂದಂತಹ ಆಟೋರಿಕ್ಷಾ ಚಾಲಕರು ಮಾಲಕರು ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಟೋರಿಕ್ಷಾ ಚಾಲಕರಿಗೆ ಮತ್ತು ಮಾಲೀಕರಿಗೆ ಆಗಾಗ ಸಂಚಾರಿ ನಿಯಮ ಅರಿವು ಕಾರ್ಯಕ್ರಮ ನಡೆಸಬೇಕು.
ನಗರದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವಾಗ ಬೀಡಾಡಿ ದನಗಳಿಂದ. ನಾಯಿಗಳಿಂದ ಪದೇಪದೇ ತೊಂದರೆ ಅನುಭವಿಸಬೇಕಾಗಿದ್ದು.ತಕ್ಷಣ ಬೀಡಾಡಿ ದನಗಳು ಮತ್ತು ನಾಯಿಗಳನ್ನು ನಗರದ ಆಚೆ ಸಾಗಿಸಲು ನಗರ ಸಭೆಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಪ್ರೇರೇಪಿಸಬೇಕು.
ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳು ಸಂಚರಿಸುವಾಗ ಅಲ್ಲಲ್ಲಿ ಬಿದ್ದಿರುವ ತಗ್ಗುಗಳಿಂದ ಅಪಘಾತಗಳಾಗುತ್ತಿವೆ. ಈ ಹಿಂದೆ ನಗರಸಭೆಯಿಂದ ಪ್ರಮುಖ ರಸ್ತೆಗಳಿಗೆ ತೆಪೆ ಹಾಕುವ ಕೆಲಸ ಮಾಡಿದ್ದರು ಅದರ ಇನ್ನೊಂದು ಬದಿಗೆ ಈಗ ತಗ್ಗು ಬಿದ್ದೀದ್ದು ಈ ರಸ್ತೆಗಳನ್ನು ಮತ್ತು ನಗರದ ಅನೇಕ ರಸ್ತೆಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳನ್ನು ತಕ್ಷಣ ಮುಚ್ಚುವಂತೆ ನಗರಸಭೆಯ ಅಧಿಕಾರಿಗಳಿಗೆ ಒತ್ತಡ ತರಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ.ಮುಖಂಡ ಮಖಬೂಲ್ ರಾಯಚೂರು. ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ.ಕಾರ್ಮಿಕ ಸಂಘಟನೆ ಮುಖಂಡ ಕೆ.ಬಿ.ಗೋನಾಳ. ಮೂಕಪ್ಪ ಮೇಸ್ತ್ರಿ. ಯಮನೂರಪ್ಪ ಹಾಲಳ್ಳಿ ಬಸಾಪುರ.ದುರ್ಗಪ್ಪ.ಯುವ ಮುಖಂಡ ಅಸಿಫ್ ಖಾನ್ ಹಣಗಿ ಮುಂತಾದವರು ಒತ್ತಾಯಿಸಿ ಮನವಿ ಅರ್ಪಿಸಿದರು.
ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ವೆಂಕಟೇಶ್ ನಾಯಕ ಮಾತನಾಡಿ ಬೀಡಾಡಿ ದನಗಳ ಬಗ್ಗೆ ನಗರಸಭೆಗೆ ಪತ್ರ ಬರೆದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
