ಯಾದಗಿರಿ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಜಾನುವಾರುಗಳಲ್ಲಿ ಕಾಲರೋಗ ಮತ್ತು ಬಾಯಿ ರೋಗ ವ್ಯಾಪಕವಾಗಿ ಹರಡಿದ್ದು, ನೂರಾರು ಕುರಿ, ಮೇಕೆಗಳು ಸಾವನ್ನಪ್ಪಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ಕುರಿಗಾಹಿಗಳು ತಮ್ಮ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಕರ್ನಾಟಕ ಪ್ರಾಂತ ರೈತ ಸಂಘವು ಜಿಲ್ಲಾ ಉಪನಿರ್ದೇಶಕರು, ಪಶು ಸಂಗೋಪನ ಇಲಾಖೆಗೆ ಪತ್ರ ಬರೆದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದೆ.
ಔಷಧಿಗಳ ಕೊರತೆ, ರೈತರಿಗೆ ಮತ್ತಷ್ಟು ಹೊರೆ
ರೈತ ಸಂಘದ ವತಿಯಿಂದ ಸಲ್ಲಿಸಲಾದ ಮನವಿ ಪತ್ರದಲ್ಲಿ, ಜಿಲ್ಲೆಯಾದ್ಯಂತ ಕುರಿಗಾಹಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಲಾಗಿದೆ. “ಕುರಿ, ಮೇಕೆ, ಎಮ್ಮೆ, ಎತ್ತು, ಹಸು ಮತ್ತು ನಾಯಿಗಳಂತಹ ಸಾಕು ಪ್ರಾಣಿಗಳು ಕಾಲರೋಗ ಮತ್ತು ಬಾಯಿ ರೋಗಕ್ಕೆ ತುತ್ತಾಗಿವೆ. ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ತಮ್ಮ ಮಾಲೀಕರ ಕಣ್ಣೆದುರೇ ಒದ್ದಾಡಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸಂಘದ ಕಾರ್ಯದರ್ಶಿ ಭೀಮರಾಯ ಪೂಜಾರಿ ತಿಳಿಸಿದರು.
ಪಶು ಸಂಗೋಪನ ಇಲಾಖೆಯಲ್ಲಿ ರೋಗಗಳಿಗೆ ಬೇಕಾದ ಅಗತ್ಯ ಔಷಧಿಗಳು ಲಭ್ಯವಿಲ್ಲ ಎಂದು ರೈತರು ಆರೋಪಿಸಿದ್ದಾರೆ. ರೈತರು ಔಷಧಿಯ ಬಗ್ಗೆ ಕೇಳಿದಾಗ, ‘ಸರ್ಕಾರದಿಂದ ಔಷಧಿಗಳು ಇನ್ನೂ ಬಂದಿಲ್ಲ’ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ರೈತರು ದುಬಾರಿ ಬೆಲೆ ನೀಡಿ ಖಾಸಗಿ ಮೆಡಿಕಲ್ ಅಂಗಡಿಗಳಿಂದ ಔಷಧಿಗಳನ್ನು ಖರೀದಿಸುವ ಅನಿವಾರ್ಯತೆ ಎದುರಾಗಿದೆ. “ನಮ್ಮ ಬದುಕು ಉಳಿಸಿಕೊಳ್ಳಲು ನಾವು ದುಬಾರಿ ಬೆಲೆಯ ಔಷಧಿಯನ್ನು ತರಬೇಕಾಗಿದೆ,” ಎಂದು ಕುರಿಗಾಹಿ ಶರಣಪ್ಪ ಪೂಜಾರಿ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಭೀಮರಾಯ ಪೂಜಾರಿ, ಗೋವಿಂದ್ ರಾಥೋಡ್ ಮತ್ತು ಮಾಳಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಯತ್ತ ಗಮನ ಹರಿಸಿ, ಮೃತ ಜಾನುವಾರುಗಳಿಗೆ ಸೂಕ್ತ ಪರಿಹಾರ ಮತ್ತು ರೋಗಪೀಡಿತ ಜಾನುವಾರುಗಳಿಗೆ ಉಚಿತ ಔಷಧಿಗಳನ್ನು ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

