ನಾಯ್ಕಲ್ ಗ್ರಾಮಕ್ಕೆ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಭೇಟಿ
ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹದಿಂದ ತತ್ತರಿಸಿರುವ ನಾಯ್ಕಲ್ ಗ್ರಾಮಕ್ಕೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಸೋಮವಾರ ಭೇಟಿ ನೀಡಿದರು. ಪ್ರವಾಹದಿಂದ ಹಾನಿಗೊಂಡ ಮನೆಗಳಿಗೆ ತೆರಳಿ ಪೀಡಿತರ ನೋವುಗಳನ್ನು ಆಲಿಸಿದ ಅವರು, ಕುಟುಂಬಗಳು ಅನುಭವಿಸುತ್ತಿರುವ ದುಸ್ಥಿತಿಯನ್ನು ಕಂಡು ಕಳಕಳ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಪ್ರವಾಹದಿಂದಾಗಿ ಮುಳುಗಿದ ಮನೆಗಳಿಗೆ ಭೇಟಿ ನೀಡಿದ ಅವರು, ಕುಟುಂಬದ ಸಂಕಷ್ಟಗಳನ್ನು ಆಲಿಸಿದರು. ಈ ವೇಳೆ ಮಾಜಿ ಜಿಲ್ಲಾಧ್ಯಕ್ಷರ ಬಳಿ ನೋವನ್ನು ಹಂಚಿಕೊಂಡ ಗ್ರಾಮಸ್ಥರು , ನಿನ್ನೆ ಗ್ರಾಮಕ್ಕೆ ಬಂದ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಕೇಳದೇ ಬೇಕಾಬಿಟ್ಟಿಯಾಗಿ ನಡೆದುಕೊಂಡು ಹಿಂತಿರುಗಿದರು. ನಿಮ್ಮಂತೆಯೇ ಯಾವೊಬ್ಬರು ತಾಳ್ಮೆಯಿಂದ ನಮ್ಮ ನೋವುಗಳನ್ನು ಆಲಿಸಲಿಲ್ಲ. ನಮ್ಮ ಬದುಕು ಹಾಳಾದಾಗ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದಂತೆಯೇ ವರ್ತಿಸಿದದ್ದು ಖಂಡನೀಯ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಭತ್ತದ ಗದ್ದೆ ಮತ್ತು ಹೊಲಗಳಲ್ಲಿ ಉಂಟಾದ ಹಾನಿಯನ್ನು ಪರಿಶೀಲಿಸಿದ ಮಾಗನೂರ, ರೈತರ ಬದುಕು ತೀವ್ರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ ಎಂದು ವಿಷಾದಿಸಿದರು.
ನಂತರ ಮಾತನಾಡಿದ ಅವರು, ಹಿಂದಿನ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಪ್ರವಾಹ ಪೀಡಿತ ಮನೆಗಳಿಗೆ ₹5 ಲಕ್ಷ ಪರಿಹಾರ ಹಾಗೂ ರೈತರಿಗೆ ಎಕರೆಗೆ 10 ಸಾವಿರ ರೂಪಾಯಿಯಿಂದ ₹50,000 ಪರಿಹಾರ ನೀಡಲಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರಕ್ಕೆ ಜನರ ನೋವು-ನಲಿವುಗಳ ಬಗ್ಗೆ ಯಾವುದೇ ಕಾಳಜಿಯೇ ಇಲ್ಲ. ಜನ ಕಣ್ಣೀರು ಹಾಕುತ್ತಿದ್ದರೂ ಈ ಸರ್ಕಾರ ಮೌನವಾಗಿರುವುದು ಜನವಿರೋಧಿ ಧೋರಣೆಗಿಂತಲೂ ಬೇರೆ ಏನೂ ಅಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಜನರ ಪರವಾಗಿ ಹೋರಾಟ ನಡೆಸಲು ಹಿಂಜರಿಯುವುದಿಲ್ಲ. ಜನರ ಕಣ್ಣೀರು ಒರೆಸುವುದು ನಮ್ಮ ಧ್ಯೇಯ, ಆದರೆ ಈ ಸರ್ಕಾರ ಜನರ ಕಣ್ಣೀರು ನೋಡುವ ಶಕ್ತಿಯೇ ಕಳೆದುಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಮರಕಲ್, ಬಸಲಿಂಗಯ್ಯ ಸ್ವಾಮಿ ಹಯ್ಯಳ ಕೆ, ಸಿದ್ದು ಕುಂಬಾರ, ಹಜರತ್ ಅಲಿ, ರಮೇಶ್ ನಾಯ್ಕಲ್, ಹಣಮಂತ ಕುಂಬಾರ, ಶಿವಪ್ಪ ಕುಂಬಾರ, ವೆಂಕಟೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

