ಲಕ್ಷ್ಮೀಕಾಂತ ನಾಯಕ
ಗುರಮಿಟ್ಕಲ್: ತಾಲ್ಲೂಕಿನ ಅಜಲಾಪುರ ಗ್ರಾಮ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಅವ್ಯವಹಾರಗಳಿಗೆ ಬೇಸತ್ತ ಗ್ರಾಮಸ್ಥರು, ಗ್ರಾಮ ಪಂಚಾಯತಿ ಕಟ್ಟಡಕ್ಕೆ ಮುಳ್ಳಿನ ಬೇಲಿ ಹಾಕಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಅನೇಕ ವರ್ಷಗಳಿಂದ ಈ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಹೋರಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಗ್ರಾಮಸ್ಥರು ಡಪ್ಪು ಮತ್ತು ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬಂದು, ಪಂಚಾಯತಿ ಕಟ್ಟಡದ ಸುತ್ತಲೂ ಮುಳ್ಳುಗಳನ್ನು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು. ಕಳೆದ ನಾಲ್ಕೈದು ವರ್ಷಗಳಿಂದ ಈ ಪಂಚಾಯತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಹಲವು ಬಾರಿ ದೂರು ನೀಡಿದ್ದರೂ, ಯಾವುದೇ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅಧಿಕಾರಿ ವಿರುದ್ಧ ಸಾಬೀತಾದರೂ ಕ್ರಮವಿಲ್ಲ:
ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಾನು ಬೇಗಂ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಸಾಬೀತಾಗಿದ್ದರೂ, ಯಾದಗಿರಿ ಜಿಲ್ಲಾ ಪಂಚಾಯತಿ ಅದ್ಯಾವ ಕಾರಣಕ್ಕೋ ಕ್ರಮ ಕೈಗೊಂಡಿಲ್ಲ. ವಸತಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಅದರಲ್ಲೂ ಜನ ಆಕ್ರೋಶ ಪತ್ರಿಕೆ ಪಿಡಿಒ ಬಾನು ಬೇಗಂ ಅವರ ಅವ್ಯವಹಾರಗಳ ಕುರಿತು ಅನೇಕ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು.
ಲಂಚ ಮತ್ತು ಅಕ್ರಮಗಳಿಗೆ ಬೇಸತ್ತ ಜನತೆ:
ಗ್ರಾಮ ಪಂಚಾಯತಿಯಲ್ಲಿ ಪ್ರತಿ ಕೆಲಸಕ್ಕೂ ಲಂಚ ಕೇಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರ್ಹ ನಿರಾಶ್ರಿತರಿಗೆ ವಸತಿ ಹಂಚಿಕೆ ಮಾಡಲು ಹಣ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪವೂ ಇದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತ ಜನರು ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಬಾನು ಬೇಗಂ ಅವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಮತ್ತು ಕೆಲವೇ ಜನರೊಂದಿಗೆ ಸೇರಿಕೊಂಡು ಎಲ್ಲೋ ಕುಳಿತು ಪಂಚಾಯತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಘಟನೆಯ ನಂತರವಾದರೂ, ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಗ್ರಾಮಸ್ಥರಿಗೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

