ಶಹಾಪೂರ:ಯಾದಗಿರಿ ಜಿಲ್ಲೆಯ ಶಹಾಪೂರ ನಗರಸಭೆಯ ವಾರ್ಡ್ ನಂ. 2 ರ ದೇವಿನಗರದಲ್ಲಿ ರಸ್ತೆ ಒತ್ತುವರಿ ಮತ್ತು ಅಕ್ರಮ ಕಟ್ಟಡ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರ ಬೇಜವಾಬ್ದಾರಿತನ ವಿವಾದಕ್ಕೆ ಕಾರಣವಾಗಿದೆ. ಬೀದರ-ಬೆಂಗಳೂರು ಮುಖ್ಯ ರಸ್ತೆಯಿಂದ ದೇವಿ ನಗರದಲ್ಲಿರುವ ರಾಜರಾಜೇಶ್ವರಿ ಬಾರ್‌ನಿಂದ ಮೋಟಗಿಮನೆಯ ವರೆಗಿನ ನಗರಸಭೆ ರಸ್ತೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆಯಗುಂಟ ಇರುವ ಮನೆಗಳ ನಿವಾಸಿಗಳು ರಸ್ತೆ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆಯ ನಕ್ಷೆಯ ಪ್ರಕಾರ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ನಗರಸಭೆ ವಿರುದ್ಧ ನ್ಯಾಯಾಲಯದಲ್ಲಿ PETITION Nos. 201652-201656/2017 & 201752-753/2017 (LB-RES) ಮೊಕದ್ದಮೆ ದಾಖಲಾಗಿತ್ತು. ಗೌರವಾನ್ವಿತ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠವು ದಿನಾಂಕ 17-04-2017 ರಂದು ತಡೆಯಾಜ್ಞೆ ಆದೇಶ ಹೊರಡಿಸಿ, ಪೌರಾಯುಕ್ತರು ನಾಲ್ಕು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಆದರೆ, ನ್ಯಾಯಾಲಯದ ಆದೇಶ ಬಂದಿದ್ದರೂ, ಇತ್ತೀಚೆಗೆ ವಾರ್ಡ್ ನಂ. 2 ರ ನ.ನಂ. 105 ಮತ್ತು 106 ರ ರಸ್ತೆ ಹಾಗೂ ಚರಂಡಿಯ ಮೇಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸದೇ ಪೌರಾಯುಕ್ತರು ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಜಿಲ್ಲಾಧಿಕಾರಿಗಳು (ಜಿಲ್ಲಾ ನಗರಾಭಿವೃದ್ಧಿ ಕೋಶ), ಯಾದಗಿರಿ ಅವರು ದಿನಾಂಕ 09-10-2025 ರಂದು ನೆನಪೋಲೆ ಪತ್ರ ಬರೆದಿದ್ದರೂ, ಪೌರಾಯುಕ್ತರು ಸಮರ್ಪಕವಾಗಿ ಸ್ಪಂದಿಸಿಲ್ಲ. ಅಷ್ಟೇ ಅಲ್ಲದೇ, “ನಾನು ತೆರವು ಗೊಳಿಸುವ ಕೆಲಸ ಮಾಡುವುದಿಲ್ಲ, ಡಿಸಿ, ಆರ್‌ಸಿ, ಪಿಡಿ-ಡಿಯುಡಿಸಿ ಹಾಗೂ ಡಿಎಂಎ ಬೆಂಗಳೂರು ಇವರೇ ಇಲ್ಲಿಗೆ ಬಂದು ಸರ್ವೆ ಇತ್ಯಾದಿ ಕೆಲಸಗಳನ್ನು ಮಾಡಿಕೊಳ್ಳಲಿ” ಎಂದು ನಿರ್ಲಜ್ಜೆಯ ಮಾತನಾಡಿದ್ದಾರೆ ಎನ್ನಲಾಗಿದೆ. ಒತ್ತುವರಿ ತೆರವುಗೊಳಿಸುವ ಕುರಿತು ಕ್ರಮ ಕೈಗೊಳ್ಳುವುದಿಲ್ಲ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿರುವುದರಿಂದ, ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ.
ಪೌರಾಯುಕ್ತರ ಈ ದುರಾಡಳಿತ ಮತ್ತು ನಿರ್ಲಕ್ಷ್ಯಕ್ಕೆ ರೋಸಿಹೋಗಿರುವ ಇದೇ ವಾರ್ಡಿನ ನಿವಾಸಿ ಕೃಷ್ಣ ತಂದೆ ಸಾಯಬಣ್ಣ ಅವರು, ಸರಕಾರಿ ಜಾಗ ಒತ್ತುವರಿ ಮಾಡಿರುವ ಬಗ್ಗೆ ಉನ್ನತ ಅಧಿಕಾರಿಗಳ ಗಮನ ಸೆಳೆಯಲು, ತಮ್ಮದೇ ವಾರ್ಡಿನ ಸಿ.ಸಿ. ರಸ್ತೆಯಗಲಕ್ಕೂ ಅಡ್ಡಲಾಗಿ ತಾವೇ ಸ್ವತಃ ತಗ್ಗು ಅಗೆಯಲು ನಿರ್ಧರಿಸಿರುವುದಾಗಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

