ಲಕ್ಷ್ಮೀಕಾಂತ ನಾಯಕ
ಶಹಪುರ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಗುತ್ತಿಗೆ (ಲೀಸ್) ರೈತರಿಗೆ ನೇರವಾಗಿ ಪರಿಹಾರ ಧನ ತಲುಪಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘವು ಸರ್ಕಾರಕ್ಕೆ ಆಗ್ರಹಿಸಿದೆ. ಬೆಳೆ ಪರಿಹಾರ ಜಮೀನಿನ ಮಾಲೀಕರ ಖಾತೆಗೆ ಜಮೆಯಾಗುತ್ತಿರುವುದರಿಂದ ಗುತ್ತಿಗೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಕಾರ್ಯದರ್ಶಿ ಭೀಮರಾಯ ಪೂಜಾರಿ, ಶಹಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ರೈತ ನಾಗಪ್ಪ ತಂದೆ ಹನುಮಂತ ಪೂಜಾರಿ ಅವರ ಪ್ರಕರಣವನ್ನು ಉದಾಹರಿಸಿದರು. ನಾಗಪ್ಪ ಅವರು ಕಳೆದ ಎರಡು ವರ್ಷಗಳಿಂದ ಬೇರೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಬೇಸಾಯ ಮಾಡುತ್ತಿದ್ದು, ಈ ವರ್ಷವೂ ಮೂರು ಎಕರೆ ಜಮೀನಿಗೆ ₹80,000 ಮುಂಗಡ ಹಣ ನೀಡಿ ಗುತ್ತಿಗೆ ಮಾಡಿಕೊಂಡಿದ್ದರು.
“ಭೂಮಿಯನ್ನು ಹದಗೊಳಿಸಲು ಮತ್ತು ಹತ್ತಿ ಬೀಜ ಬಿತ್ತನೆ ಮಾಡಲು ರೈತ ನಾಗಪ್ಪ ಅವರು ₹10,360 ರಿಂದ ₹15,000 ಖರ್ಚು ಮಾಡಿದ್ದಾರೆ. ಇದರ ಜೊತೆಗೆ ಸಾವಿರಾರು ರೂಪಾಯಿ ಮೌಲ್ಯದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯೂ ಆಗಿದೆ. ಒಂದು ಎಕರೆಗೆ ಸುಮಾರು ₹30,000 ರಿಂದ ₹35,000 ವರೆಗೆ ಖರ್ಚು ಬಂದಿದೆ” ಎಂದು ಭೀಮರಾಯ ಪೂಜಾರಿ ವಿವರಿಸಿದರು.
ಆದರೆ, ಅತಿವೃಷ್ಟಿಯಿಂದಾಗಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ಬೆಳೆ ನಷ್ಟದ ಸಮೀಕ್ಷೆ ಆರಂಭಿಸಿದ್ದು, ಪರಿಹಾರದ ಹಣ ನೇರವಾಗಿ ಜಮೀನಿನ ಮಾಲೀಕರಾದ ರಫೀಕ್ ಸಾಬ್ ಅವರ ಖಾತೆಗೆ ಜಮೆಯಾಗುತ್ತದೆ. “₹80,000 ಮುಂಗಡ ನೀಡಿ, ಎಕರೆಗೆ ₹35,000 ಖರ್ಚು ಮಾಡಿದ ಗುತ್ತಿಗೆ ರೈತ ಎಲ್ಲಿಗೆ ಹೋಗಬೇಕು?” ಎಂದು ಅವರು ಪ್ರಶ್ನಿಸಿದರು.
ಆದ್ದರಿಂದ, ಗುತ್ತಿಗೆ ಪಡೆದ ರೈತರಿಗೆ ನೇರವಾಗಿ ಪರಿಹಾರ ಹಣ ತಲುಪುವಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿಲಾರೋದ್ದೀನ್ ಸಾಬ್ ಮುಲ್ಲಾ, ಹುಸೇನ್ ಸಾಬ್ ಮತ್ತು ನಾಗಪ್ಪ ಪೂಜಾರಿ ಉಪಸ್ಥಿತರಿದ್ದರು.

