ಉಕ್ಕನಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ‘ಕಾಯಕ ಗ್ರಾಮ’ ಕಾರ್ಯಕ್ರಮಕ್ಕೆ ಚಾಲನೆ
ಶಹಾಪುರ (ಯಾದಗಿರಿ):
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಯಾದಗಿರಿ, ತಾಲೂಕು ಪಂಚಾಯಿತಿ ಶಹಾಪುರ ಹಾಗೂ ಗ್ರಾಮ ಪಂಚಾಯಿತಿ ಉಕ್ಕನಾಳ ಇವರ ಸಹಯೋಗದಲ್ಲಿ ನವೆಂಬರ್ ೬ರಂದು ಉಕ್ಕನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಕಾಯಕ ಗ್ರಾಮ’ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಲವೀಶ್ ಒರಡಿಯಾ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ ಶ್ರೀ ಲವೀಶ್ ಒರಡಿಯಾ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ವಿಭಾಗವು ಪ್ರತಿ ಏಪ್ರಿಲ್ ತಿಂಗಳಲ್ಲಿ ತಯಾರಿಸುವ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆ ಶ್ರೇಯಾಂಕದ (Gram Panchayat Performance Ranking) ಪಟ್ಟಿಯಲ್ಲಿ ಹಿಂದುಳಿದಿರುವ ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳು ದತ್ತು ಪಡೆದು ಮೂರು ವರ್ಷಗಳ ಕಾಲ ಅಭಿವೃದ್ಧಿಪಡಿಸುವುದೇ ಕಾಯಕ ಗ್ರಾಮ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾನಾ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಈ ದತ್ತು ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಗಾವಹಿಸಿ, ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಕಾಯಕ ಗ್ರಾಮ ಯೋಜನೆಯಡಿ ದತ್ತು ಪಡೆದ ಉಕ್ಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಲಭ್ಯಗಳ ಪಟ್ಟಿಯನ್ನು ತಯಾರಿಸಿ, ಈ ಸಂದರ್ಭದಲ್ಲಿ ಗ್ರಾಮಸ್ಥರ ಕುಂದುಕೊರತೆಗಳ ಅಹವಾಲುಗಳನ್ನು ಆಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಹಾಪುರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಬಸವರಾಜ ಶರಭೈ, ಸಹಾಯಕ ನಿರ್ದೇಶಕರಾದ ಶ್ರೀಮತಿ ಶಾರದಮ್ಮ ನಾಗ್ಲೋಟ್, ಜಿಲ್ಲಾ ಪಂಚಾಯಿತಿ ಎಸ್.ಬಿ.ಎಂ. ಸಂಯೋಜಕ ಶಿವುಕುಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೇನು ಸಿಂಗ್, ಪಿಡಿಒ ಶ್ರೀ ಮಡಿವಾಳಪ್ಪ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

