ಜನ ಆಕ್ರೋಶ ಸುದ್ದಿ ಜಾಲ
ಯಾದಗಿರಿ (ದಿನಾಂಕ: ನವೆಂಬರ್ 3): 2011ರಿಂದ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರ್ಯಾಚೂಟಿ) ನೀಡಬೇಕು ಎಂದು ಒತ್ತಾಯಿಸಿ, ರಾಜ್ಯದ ಅಂಗನವಾಡಿ ನೌಕರರ ಸಂಯುಕ್ತ ಸಂಘರ್ಷ ಸಮಿತಿಯ ವತಿಯಿಂದ ನವೆಂಬರ್ 6, 2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಅನಿರ್ದಿಷ್ಟ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಅಖಿಲ ಭಾರತ ಸಂಯುಕ್ತ ಕಾರ್ಮಿಕ ಸಂಘಟನೆಗಳ ಕೇಂದ್ರಕ್ಕೆ (ಎಐಯುಟಿಯುಸಿ) ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘವೂ ಸೇರಿದಂತೆ ಒಟ್ಟು ಮೂರು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಬಳಿಕ ಅಂಗನವಾಡಿ ನೌಕರರಿಗೆ ಗ್ರ್ಯಾಚೂಟಿ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾತ್ವಿಕವಾಗಿ ಒಪ್ಪಿಕೊಂಡಿತ್ತು. ಆದರೆ, ನಿವೃತ್ತಿಯಾದ ಎಲ್ಲರಿಗೂ ಗ್ರ್ಯಾಚೂಟಿ ನೀಡುವ ಬದಲು ಕೇವಲ 2023 ರಿಂದ ನಿವೃತ್ತಿಯಾಗಲಿರುವವರಿಗೆ ಮಾತ್ರ ಗ್ರ್ಯಾಚೂಟಿ ನೀಡಲು ಇಲಾಖೆಯು ಆದೇಶ ಮಾಡಿತ್ತು. ಈ ನೌಕರ ವಿರೋಧಿ ಧೋರಣೆಯನ್ನು ವಿರೋಧಿಸಿ ಸಂಘಟನೆಗಳು ಈ ಹಿಂದೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟಗಳನ್ನು ನಡೆಸಿದ್ದವು.
ಈ ಹೋರಾಟಗಳ ನಂತರ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಮ್ಮುಖದಲ್ಲಿ ಸಂಯುಕ್ತ ಸಂಘರ್ಷ ಸಮಿತಿಯ ಪದಾಧಿಕಾರಿಗಳೊಂದಿಗೆ ಎರಡು ಮೂರು ಸಭೆಗಳು ಕೂಡಾ ನಡೆದಿದ್ದವು. ಈ ಎಲ್ಲಾ ಸಭೆಗಳಲ್ಲಿ 2011ರಿಂದ ನಿವೃತ್ತರಾದ ಎಲ್ಲರಿಗೂ ಗ್ರ್ಯಾಚೂಟಿ ಹಣ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಆದರೆ, ಈ ಸಭೆ ನಡೆದು ಹತ್ತು ತಿಂಗಳು ಕಳೆದರೂ ಇಲ್ಲಿಯವರೆಗೆ ಗ್ರ್ಯಾಚೂಟಿ ಹಣ ನೀಡುವ ಕುರಿತು ಯಾವುದೇ ಆದೇಶ ಹೊರಬಿದ್ದಿಲ್ಲ. ಸರ್ಕಾರ ಮತ್ತು ಇಲಾಖೆಯ ಈ ಹುಸಿ ಭರವಸೆಯನ್ನು ಪ್ರತಿಭಟಿಸಿ ಮತ್ತು ಕೂಡಲೇ 2011ರಿಂದ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗ್ರ್ಯಾಚೂಟಿ ಹಣ ನೀಡಬೇಕೆಂದು ಒತ್ತಾಯಿಸಿ ಈ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ನಿವೃತ್ತ ಅಂಗನವಾಡಿ ನೌಕರರು ಈ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್ ಯಾದಗಿರಿ ಅವರು ತಿಳಿಸಿದ್ದಾರೆ.

