ಅತಿವೃಷ್ಟಿ ಹಾನಿ ಸಮೀಕ್ಷೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಧರ್ಮಣ್ಣ ತಹಶೀಲ್ದಾರ್ ಗಂಭೀರ ಆರೋಪ
ರೈತ ಹೋರಾಟಗಾರನಿಂದ ತೋಟಗಾರಿಕಾ ಇಲಾಖೆ ವಿರುದ್ಧ ಆಕ್ರೋಶ; ಪರಿಹಾರ ಸಿಗದೆ ಸಾಲದ ಶೂಲೆಯಲ್ಲಿ ಸಿಲುಕಿದ ರೈತರು
ಸುರಪುರ, ಅಕ್ಟೋಬರ್ 12: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ತೋಟಗಾರಿಕಾ ಬೆಳೆಗಳು ಸೇರಿದಂತೆ ಕೃಷಿ ಬೆಳೆಗಳು ವ್ಯಾಪಕವಾಗಿ ಹಾನಿಯಾಗಿದ್ದರೂ, ಸರ್ಕಾರದ ಸೂಚನೆಯಂತೆ ಸಮೀಕ್ಷೆ ನಡೆಸಬೇಕಿದ್ದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತಪರ ಹೋರಾಟಗಾರ ಧರ್ಮಣ್ಣ ತಹಶೀಲ್ದಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಬೆಳೆ ಹಾನಿ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿ, ಕಂದಾಯ, ಕೃಷಿ, ತೋಟಗಾರಿಕಾ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ವರದಿ ಸಲ್ಲಿಸಲು ಸೂಚಿಸಿದ್ದರೂ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ರೈತರು ಇಂದು ಸಾಲದ ಸೂಳೆಯಲ್ಲಿ ಸಿಲುಕುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಪೂರ್ಣ ಸರ್ವೆ: ಕೇವಲ ಕಾಟಾಚಾರಕ್ಕೆ ಭೇಟಿ
ಸುರಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 90 ಏಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯ, ದಾಳಿಂಬೆ, ಟೊಮೇಟೊ ಬೆಳೆಗಳು ಭಾರೀ ಮಳೆಯಿಂದ ಸಂಪೂರ್ಣ ಹಾಳಾಗಿವೆ. ಆದರೆ, ಅಧಿಕಾರಿಗಳು ಕೇವಲ ‘ಕಾಟಾಚಾರಕ್ಕೆ’ ಎಂಬಂತೆ ಕೆಲವೊಂದು ತೋಟಗಳಿಗೆ ಮಾತ್ರ ಹೋಗಿ ಬಂದಿದ್ದಾರೆ. ಸಂಪೂರ್ಣ ಸಮೀಕ್ಷೆ ಮಾಡದೆ, ತೋಟಗಾರಿಕಾ ಬೆಳೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅನೇಕ ರೈತರು ದೂರಿದ್ದಾರೆ.
ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3000 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿದ್ದು, ನಿರಂತರ ಮಳೆಯಿಂದಾಗಿ 2300 ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿದೆ. ಆದರೆ, ಅಧಿಕಾರಿಗಳು ಕೇವಲ ಭಾಗಶಃ ಸಮೀಕ್ಷೆ ನಡೆಸಿ, ಉಳಿದ ಜಮೀನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದನ್ನು ರೈತ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಧರ್ಮಣ್ಣ ತಹಶೀಲ್ದಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಚೇರಿಗಳಲ್ಲಿ ಸ್ಪಂದನೆ ಇಲ್ಲ: ಅಮಾನವೀಯ ವರ್ತನೆ
ರೈತರು ತಮ್ಮ ಬೆಳೆ ಹಾನಿಯ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರೂ, ಅವರು ಜಮೀನಿಗೆ ತೆರಳಿ ಪರಿಶೀಲನೆ ನಡೆಸಿಲ್ಲ. “ನಮ್ಮ ರೈತ ಸಂಘಟನೆ ನಾಯಕರು ಪ್ರತಿದಿನ ಕಚೇರಿಗೆ ಹೋಗಿ-ಬಂದರೂ ಒಬ್ಬ ಅಧಿಕಾರಿಗಳು ಸಹಿತ ನಮ್ಮೊಂದಿಗೆ ಸ್ಪಂದಿಸಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
- ಸಿಬ್ಬಂದಿಗಳ ನಿರ್ಲಕ್ಷ್ಯ: ತೋಟಗಾರಿಕಾ ಇಲಾಖೆಯ ಕಚೇರಿಗೆ ಮಾಹಿತಿ ಕೇಳಲು ಬರುವ ರೈತರು ಸಿಬ್ಬಂದಿಗಳಿಂದ ಅನುಚಿತ ವರ್ತನೆಗೆ ಒಳಗಾಗುತ್ತಿದ್ದಾರೆ.
- ‘ಬರವಣಿಗೆಯಲ್ಲಿ ಕೇಳಿ’: “ಏನೇ ಕೇಳಿದರೂ ಬರವಣಿಗೆಯಲ್ಲಿ ಕೇಳಿ ಎನ್ನುತ್ತಾರೆ. ಓದು ಬರಹ ಗೊತ್ತಿಲ್ಲದ ನಮಗೆ ಇವೆಲ್ಲ ಹೇಗೆ?” ಎಂದು ಬೇಸರಗೊಂಡ ರೈತರು ತಮ್ಮ ನೋವನ್ನು ಪತ್ರಿಕೆ ಮೂಲಕ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ, ರೈತರಿಗೆ ಅನುದಾನ ನೀಡಲು ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿದಿವೆ. ಅವು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ರೈತಪರ ಹೋರಾಟಗಾರ ಧರ್ಮಣ್ಣ ತಹಶೀಲ್ದಾರ್ ಮತ್ತೊಮ್ಮೆ ಆರೋಪಿಸಿದ್ದಾರೆ.

