ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಸಲ್ಲದು: ಸರ್ಕಾರಕ್ಕೆ ಜಯ ಕರ್ನಾಟಕ ವೇದಿಕೆ ಎಚ್ಚರಿಕೆ
ಸುರಪುರ: ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಘೋಷಿಸಿರುವ ಪರಿಹಾರ ವಿತರಣೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪರಿಹಾರ ವಿತರಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಒತ್ತಾಯಿಸಿದ್ದಾರೆ.
ನಿರಂತರ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಜಲಾವೃತಗೊಂಡು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದಾಗಿ ರೈತರ ಬದುಕು ದುಸ್ಥಿತಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರವನ್ನು ಅರ್ಹ ಎಲ್ಲ ಸಂತ್ರಸ್ತರಿಗೆ ತಲುಪಿಸಬೇಕಿದೆ.
ಸಮಾನ ಪರಿಗಣನೆಗೆ ಆಗ್ರಹ
ಬೆಳೆ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು. ಅಲ್ಲದೆ, ಕೇವಲ ಬೆಳೆ ಕಳೆದುಕೊಂಡ ರೈತರಷ್ಟೇ ಅಲ್ಲದೆ, ಮಳೆಯಿಂದ ಬೆಳೆ ಮತ್ತು ಮನೆ ಕಳೆದುಕೊಂಡ ಕುಟುಂಬಗಳನ್ನು ಸಮಾನವಾಗಿ ಪರಿಗಣಿಸಿ ಎಲ್ಲರಿಗೂ ಸೂಕ್ತ ಮತ್ತು ಸಮಾನ ಪರಿಹಾರವನ್ನು ಒದಗಿಸಬೇಕೆಂದು ವೇದಿಕೆ ಒತ್ತಾಯಿಸಿದೆ.
ಈ ಕುರಿತು, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ ಮತ್ತು ಸುರಪುರ ತಾಲೂಕಾ ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಅವರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ವರದಿ: ನಾಗಭೂಷಣ್ ಯಾಳಗಿ

