ಸುರಪುರದಲ್ಲಿ ಬೆಳೆ ಹಾನಿ ಪರಿಶೀಲಿಸಿದ ಜಿಲ್ಲಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್: ಸೂಕ್ತ ಪರಿಹಾರಕ್ಕೆ ರೈತರಿಂದ ಒತ್ತಾಯ
ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್ ಅವರು ಭೇಟಿ ನೀಡಿ, ನಷ್ಟವಾದ ಬೆಳೆಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿಯವರು ಸುರಪುರ ತಾಲೂಕಿನ ದೇವಪುರ, ನಾಗರಾಳ, ಹಂದ್ರಾಳ, ಕೋನಾಳ, ದೇವತ್ಕಲ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ, ರೈತರು ಬೆಳೆದ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ ಮತ್ತು ತೊಗರಿ ಬೆಳೆಗಳ ಹಾನಿಯನ್ನು ಸ್ವತಃ ಪರಿಶೀಲಿಸಿ, ನಷ್ಟದ ಪ್ರಮಾಣದ ಬಗ್ಗೆ ರೈತರಿಂದ ನೇರವಾಗಿ ಮಾಹಿತಿ ಪಡೆದರು.
ಸಾಲ ಮನ್ನಾ ಮತ್ತು ಪರಿಹಾರಕ್ಕೆ ಆಗ್ರಹ
ನಾಗರಾಳ ಗ್ರಾಮದ ಹೊಲಗಳಿಗೆ ಜಿಲ್ಲಾಧಿಕಾರಿಯವರು ಭೇಟಿ ನೀಡಿದ ಸಂದರ್ಭದಲ್ಲಿ, ರೈತ ಮುಖಂಡರಾದ ಗೋವಿಂದರಾಯ ಹುಲಕಲ್ ಅವರು ಸತತ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.
ಬೆಳೆ ಹಾನಿಗೆ ಸೂಕ್ತ ಹಾಗೂ ತ್ವರಿತವಾಗಿ ಪರಿಹಾರವನ್ನು ಘೋಷಿಸಬೇಕು ಮತ್ತು ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರೈತ ಮುಖಂಡರು ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಚ್ ಎಸ್ ಸರಕಾವಾಸ, ಕಂದಾಯ ನಿರೀಕ್ಷಕರಾದ ಮಲ್ಕಜಪ್ಪ, ಎಡಿ ಚೆನ್ನಬಸಪ್ಪ, ಎಇಒ ಶ್ರೀಧರ್, ಹಾಗೂ ದೇವಪುರ, ನಾಗರಾಳ, ದೇವತ್ಕಲ್ ಗ್ರಾಮಗಳ ಲೆಕ್ಕಾಧಿಕಾರಿಗಳು ಹಾಜರಿದ್ದರು. ಅಲ್ಲದೆ, ನಾಗರಾಳ ಗ್ರಾಮದ ಮುಖಂಡರಾದ ತಿಪ್ಪಣ್ಣ ಚೆನ್ನೂರ, ಮಾಜಿ ಸದಸ್ಯ ಈರಣ್ಣಗೌಡ, ದೊಡ್ಡಪ್ಪಗೌಡ, ಭೀಮಣ್ಣ ಗುಡುಗುಂಟಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
(ವರದಿ: ಡಾ. ಎಚ್ ಎಮ್. ಪಾಟೀಲ ನಾಗರಾಳ)

