ಜನ ಆಕ್ರೋಶ
ಯಾದಗಿರಿ: ನಿರಂತರ ಭಾರಿ ಮಳೆ ಮತ್ತು ಭೀಮ ನದಿಯ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾಗೂ ಮನೆ ಹಾನಿಯನ್ನು ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಿ ಕುಮಾರ ನಾಯಕ ಮತ್ತು ಯಾದಗಿರಿ ಶಾಸಕರಾದ ಶ್ರೀ ಚನ್ನಾರೆಡ್ಡಿ ಪಾಟೀಲ್ ತನ್ನೂರು ಅವರು ಇಂದು ಖುದ್ದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿ ಶೀಘ್ರವೇ ನ್ಯಾಯಯುತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಯಾದಗಿರಿ ತಾಲೂಕಿನ ಯಾದಗಿರಿ ಬಿ, ನಾಯ್ಕಲ್, ಗುರುಶಿಣಗಿ, ಹತ್ತಿಗೂಡುರ್ ಗ್ರಾಮಗಳ ವ್ಯಾಪ್ತಿಯ ಸೀಮಾಂತರಕ್ಕೆ ಭೇಟಿ ನೀಡಿದ ನಾಯಕರು, ಮುಖ್ಯವಾಗಿ ಹಾನಿಗೊಳಗಾದ ಭತ್ತ ಮತ್ತು ಹತ್ತಿ ಬೆಳೆಗಳ ನಷ್ಟವನ್ನು ಪರಿಶೀಲಿಸಿದರು.
ಸಮೀಕ್ಷೆ ಆರಂಭ, ರೈತರಿಗೆ ಸರಿಯಾದ ಮಾಹಿತಿ ನೀಡಲು ಸೂಚನೆ
ಈ ವೇಳೆ ಮಾತನಾಡಿದ ಸಂಸದ ಜಿ. ಕುಮಾರ ನಾಯಕ, “ಭೀಮ ನದಿ ಉಕ್ಕಿ ಹರಿದ ಕಾರಣದಿಂದ ಉಂಟಾದ ಬೆಳೆ ಹಾನಿ ಕುರಿತು ಈಗಾಗಲೇ ಸಮೀಕ್ಷೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದ್ದಾರೆ. ಈ ವರದಿಯ ಆಧಾರದ ಮೇಲೆ ಸರ್ಕಾರವು ಪರಿಹಾರ ಒದಗಿಸಲಿದೆ,” ಎಂದು ತಿಳಿಸಿದರು.
ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ, ಹತ್ತಿ, ಭತ್ತ, ತೊಗರಿ, ಜೋಳ ಸೇರಿದಂತೆ ಬಿತ್ತನೆಯಾದ ಎಲ್ಲಾ ಬೆಳೆಗಳ ಹಾನಿಯ ಸಮೀಕ್ಷೆಯನ್ನು ನ್ಯಾಯಯುತವಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಎನ್‌ಡಿಆರ್‌ಎಫ್ ಮತ್ತು ರಾಜ್ಯದಿಂದ ಪರಿಹಾರ
ಪರಿಹಾರ ವಿತರಣೆ ಕುರಿತು ಸ್ಪಷ್ಟಪಡಿಸಿದ ಸಂಸದರು, ಸಮೀಕ್ಷೆ ಪೂರ್ಣಗೊಂಡ ನಂತರ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರದ ಎನ್‌ಡಿಆರ್‌ಎಫ್ (NDRF) ನಿಧಿಯಿಂದ ಪರಿಹಾರ ದೊರಕಲಿದೆ ಎಂದು ತಿಳಿಸಿದರು. “ಒಂದು ವೇಳೆ ಕೇಂದ್ರ ಸರ್ಕಾರದಿಂದ ಪರಿಹಾರ ನಿಧಿ ಬಿಡುಗಡೆಗೆ ತಡವಾದರೆ, ನಾನು ಕೇಂದ್ರಕ್ಕೆ ಪತ್ರ ಬರೆದು ಈ ಭಾಗದ ರೈತರಿಗೆ ಕೂಡಲೇ ಪರಿಹಾರ ಕೊಡಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,” ಎಂದು ದೃಢ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೂ ಭೇಟಿ ನೀಡಿ, ಶೀಘ್ರವೇ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಶ್ರೀಭೀಮಣ್ಣ ಮೇಟಿ, ಶ್ರೀ ಸುದರ್ಶನ ನಾಯಕ್, ಶ್ರೀ ಶಾಂತಗೌಡ ನಾಯ್ಕಲ್ ಸೇರಿದಂತೆ ಅನೇಕ ರೈತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ನಾಗಭೂಷಣ್ ಯಾಳಗಿ

