ಯಾದಗಿರಿ: ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಮುಖ್ಯಮಂತ್ರಿಗಳ ೨೦೨೫-೨೬ನೇ ಸಾಲಿನ ಆಯ-ವ್ಯಯ ಭಾಷಣದ ಕಂಡಿಕೆ ೨೭೨ರಂತೆ ದತ್ತು ಗ್ರಾಮ ಕಾರ್ಯಕ್ರಮದಡಿ ಹಿರಿಯ ಅಧಿಕಾರಿಗಳೆಲ್ಲರೂ ತಾಲೂಕಿಗೆ ಒಂದು ಗ್ರಾಮವನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶ್ರೀ ಲವೀಶ್ ಒರಡಿಯಾ ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಜನಜೀವನದ ಸುಧಾರಣೆಗೆ ಹೊಸ ದಿಕ್ಕು ನೀಡುವ ಪ್ರಯತ್ನವಾಗಿ, ಸಿಇಒ ಶ್ರೀ ಲವೀಶ್ ಒರಡಿಯಾ ಅವರು ನವೆಂಬರ್ ೩ರಂದು ಅರಕೇರಾ ಬಿ ಗ್ರಾಮವನ್ನು ದತ್ತು ತೆಗೆದುಕೊಂಡು ದತ್ತು ಗ್ರಾಮ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರಕೇರಾ ಬಿ ಗ್ರಾಮದಲ್ಲಿ ಆಯೋಜಿಸಿದ್ದ ಈ ‘ಕಾಯಕ ಗ್ರಾಮ’ ಕಾರ್ಯಕ್ರಮದಲ್ಲಿ ಸ್ಥಳೀಯ ಜನತೆ, ಶಿಕ್ಷಕರು, ಯುವಕರು ಮತ್ತು ಮಹಿಳಾ ಸಂಘಟನೆಗಳು ಉತ್ಸಾಹದಿಂದ ಭಾಗವಹಿಸಿದ್ದರು. ಗ್ರಾಮಾಭಿವೃದ್ಧಿಯು ಕೇವಲ ಸರ್ಕಾರದ ಹೊಣೆಗಾರಿಕೆ ಅಲ್ಲ, ನಾಗರಿಕರ ಸಹಕಾರವೂ ಅಗತ್ಯ ಎಂದು ಹೇಳಿದ ಶ್ರೀ ಲವೀಶ್ ಒರಡಿಯಾ ಅವರು, ಅರಿಕೇರಾ ಬಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಉದ್ದೇಶದಿಂದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಪರಿಸರ ರಕ್ಷಣೆ ಸೇರಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಂದಿನ ಮೂರು ವರ್ಷಗಳಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳು, ತೆರಿಗೆ ವಸೂಲಾತಿ, ಸೇವಾ ವಿತರಣೆ, ಕೂಸಿನ ಮನೆ, ಅರಿವು ಕೇಂದ್ರ, ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ, ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ, ವಿಶೇಷ ಚೇತನರ ಅಭಿವೃದ್ಧಿ, ಪರಿಶಿಷ್ಠ ಜಾತಿ ಪಂಗಡಗಳ ಕಲ್ಯಾಣ, ಮನರೇಗಾ ಯೋಜನೆಗಳ ಉತ್ತಮ ಅನುಷ್ಠಾನ ಹಾಗೂ ಆಡಳಿತ ಸುಧಾರಣೆ ಸೇರಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದರು.
ಅಲ್ಲದೆ, ಸ್ಥಳೀಯ ಅಧಿಕಾರಿಗಳಿಗೆ ಮತ್ತು ಪಂಚಾಯಿತಿ ಸದಸ್ಯರಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡುವಂತೆ ಸಿಇಒ ಸೂಚಿಸಿದರು. ಅವರು ಗ್ರಾಮದಲ್ಲಿ ನೇರವಾಗಿ ಜನರ ಸಮಸ್ಯೆಗಳನ್ನು ಕೇಳಿ, ಅವುಗಳಿಗೆ ತಕ್ಷಣ ಪರಿಹಾರ ನೀಡುವ ಭರವಸೆ ನೀಡಿದರು. ಸಿಇಒ ಅವರು ಗ್ರಾಮವನ್ನು ದತ್ತು ತೆಗೆದುಕೊಂಡಿರುವುದು ಅರಿಕೇರಾ ಬಿ ಗ್ರಾಮಕ್ಕೆ ಇತಿಹಾಸಾತ್ಮಕ ಕ್ಷಣವಾಗಿದ್ದು, ನಮ್ಮ ಗ್ರಾಮಕ್ಕೆ ಹೊಸ ಜೀವ ತುಂಬಲಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಗಂಡ ಸುಬಾಶ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮರೇಶ ಪಾಟೀಲ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

